ಬ್ಯಾಡ್ಗಿ

ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಬ್ಯಾಡಗಿ: ಸಾರ್ವಜನಿಕ ಆರೋಗ್ಯ ವಲಯದಲ್ಲಿ ಮಾನಸಿಕ ಆರೋಗ್ಯ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಿಶ್ವದಾದ್ಯಂತ ಒಂದು ಮಿಲಿಯನ್‌ ಜನರು ಮಾನಸಿಕ ಸಮಸ್ಯೆಯಿಂದ ಬಳಲುವಂತಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಟಿ.ಸತೀಶ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ "ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ" ಅಂಗವಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನರಲ್ಲಿ ಖಿನ್ನತೆಯಿಂದಾಗಿ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಮಾನಸಿಕ ಕಾಯಿಲೆಗಳಿಂದ ಮದ್ಯವ್ಯಸನಿಗಳಾಗುವ ಸಾಧ್ಯತೆ ಹೆಚ್ಚಿದೆ. ಕೋವಿಡ್‌ ಪರಿಸ್ಥಿತಿ ಜನರ ಮಾನಸಿಕ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ಸಾರ್ವಜನಿಕರು ಈ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ತಮ್ಮ ಆರೋಗ್ಯದ ರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು.

ಜಿಲ್ಲಾ ಮನೋವೈದ್ಯರಾದ ಡಾ.ವಿಜಯಕುಮಾರ ಬಳಿಗಾರ ಮಾತನಾಡಿ, ಮಾನಸಿಕ ಅಸ್ವಸ್ಥತೆಯ ಸಮಸ್ಯೆಗಳು, ಚಿಕಿತ್ಸೆ ಮತ್ತು ಪರಿಹಾರಗಳು"  ಕುರಿತು ವಿವರಿಸಿದರಲ್ಲದೇ,  ಶೇಕಡಾ 60ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೂ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಿಂದ ಒತ್ತಡಕ್ಕೆ ಒಳಗಾಗಿ ಬದುಕುತ್ತಿದ್ದು, ಅದರಿಂದ ಹೊರ ಬರುವ ವ್ಯವಸ್ಥೆಗೆ ದಾರಿ ಕಂಡು ಕೊಳ್ಳಬೇಕಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

 ದಿವಾಣಿ ನ್ಯಾಯಾಧೀಶ ಧನುರಾಜ್.ಎಸ್.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಎಸ್ ಬಟ್ಟಲಕಟ್ಟಿ ವಹಿಸಿದ್ದರು. ಸರ್ಕಾರಿ ಅಭಿಯೋಜಕರಾದ ರಾಜಣ್ಣ ನ್ಯಾಮತಿ, ಕೆ.ಆರ್.ಲಮಾಣಿ, ಟಿಎಚ್'ಓ ಡಾ.ಮಹಮ್ಮದ್ ಅರಾಫತ್, ಡಾ.ಪುಟ್ಟರಾಜು, ಡಾ.ಶ್ರೀನಿವಾಸ, ವಕೀಲರಾದ ಭಾರತಿ ಕುಲಕರ್ಣಿ, ಎಂ.ಜೆ.ಪಾಟೀಲ, ಎಸ್.ಎಸ್.ಕೊಣ್ಣೂರ, ಲಕ್ಷ್ಮೀ ಗುಗ್ಗರಿ, ಫೀರಪ್ಪ ಲಮಾಣಿ, ಎಂ.ಬಿ.ನಾಯ್ಕರ, ನ್ಯಾಯಾಂಗ ಹಾಗೂ ಆರೋಗ್ಯ ಇಲಾಖೆಗಳ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುರೇಶ ಗುಂಡಪ್ಪನವರ ಸ್ವಾಗತಿಸಿದರು, ವೈ.ಎನ್.ಹಿರಿಯಕ್ಕನವರ ವಂದಿಸಿದರು.

ಸುದ್ದಿ ಓದಿ