ಬ್ಯಾಡ್ಗಿ

ವಿಶ್ವ ಕ್ಯಾನ್ಸರ್ ದಿನಾಚಾರಣೆ

ವಿಶ್ವ ಕ್ಯಾನ್ಸರ್ ದಿನಾಚಾರಣೆ

ಬ್ಯಾಡಗಿ 06: ತಾಲೂಕಾ ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಎನ್.ಸಿ.ಡಿ. ಘಟಕ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚಾರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪುಟ್ಟರಾಜ ಅವರು, ಸಾರ್ವಜನಿಕರು ದೇಹದ ಯಾವುದೇ ಭಾಗದಲ್ಲಿ ಹುಣ್ಣು ಅಥವಾ ಗಡ್ಡೆಯಂತಹ ಲಕ್ಷಣಗಳು ಕಂಡುಬಂದ್ದಲ್ಲಿ ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದರೆ ಗಡ್ಡೆ ಬೆಳೆಯುವುದರ ಮೂಲಕ ಕ್ಯಾನ್ಸರ್’ಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಈ ಕ್ಯಾನ್ಸರ್ ಕಾಯಿಲೆ ಬಾರದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. 

ಮಕ್ಕಳ ತಜ್ಞ ಡಾ. ಶ್ರೀನಿವಾಸ ಮಾತನಾಡಿ, ಈಗಾಗಲೇ ಕ್ಯಾನ್ಸರ್ ಪೀಡಿತ ಒಳಗಾದವರು ತಮ್ಮ ಮುಂದಿನ ಆರೋಗ್ಯ ಶೈಲಿಯನ್ನು ಉತ್ತಮವಾಗಿ ರೂಪಿಸಿಕೊಂಡು ಗುಣಮುಖರಾಗುವ ಬಗ್ಗೆ ತಿಳುವಳಿಕೆಯನ್ನು ನೀಡಿದರು. ವೈದ್ಯಾಧಿಕಾರಿಗಳಾದ ಡಾ.ಮಹೇಶ ಭಜಂತ್ರಿ, ಸ್ತ್ರೀ ರೋಗ ತಜ್ಞೆ ಡಾ.ಗೀತಾ ಕ್ಯಾನ್ಸರ್ ರೋಗದ ಲಕ್ಷಣಗಳು ಹಾಗೂ ಅದರ ಬಗ್ಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಹೀಲ್ ಹರವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸದಾನಂದ ಚಿಕ್ಕಮಠ ಸೇರಿದಂತೆ ಇತರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಶ್ವೇತಾ ಕಾಯಕದ ಸ್ವಾಗತಿಸಿ ನಿರೂಪಿಸಿದರು. ಮಹಾಲಿಂಗ ಮೂಡಬಾಗಿಲ ವಂದಿಸಿದರು.

ಸುದ್ದಿ ಓದಿ