ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕೆ ಜಾಗೃತರಾಗಿ ಕೆಲಸ ಮಾಡಿ
ಶಾಸಕ ಯಶವಂತರಾಯಗೌಡ ಪಾಟೀಲ ಸೂಚನೆ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಇಂಡಿ 05: ಕೊರೋನಾ ವೈರಸನ್ ಎರಡನೇ ಅಲೆ ಶುರುವಾಗಿ ಈಗಾಗಲೆ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ತಿಳಿದು ಬಂದಿದ್ದು, ಗಡಿಗೆ ಹೊಂದಿಕೊಂಡಿರುವ ನಾವು ನಿತ್ಯ ಮಹಾರಾಷ್ಟ್ರ ಜನರ ಸಂಪರ್ಕ ಮಾಡುತ್ತೇವೆ. ಆ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯವರು ಮುಂಜಾಗೃತರಾಗಿ ಕಟ್ಟೆಚ್ಚರ ವಹಿಸಿ ಗಡಿಯಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಜಾಗೃತರಾಗಿ ಕೆಲಸ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆರೋಗ್ಯಾಧಿಕಾರಿಗಳಿಗೆ ಹೇಳಿದರು.
ಅವರು ಸೋಮವಾರ ಪಟ್ಟಣದ ಮಿನಿವಿಧಾನಸೌಧದಲ್ಲಿ 2021-22 ನೇ ಸಾಲಿನ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಲೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಅಂರ್ತಜಲಮಟ್ಟ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಗ್ರಾಮಿಣ ಭಾಗದ ವಸತಿಗಳಲ್ಲಿರುವ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬರಬಹುದು. ಆದ್ದರಿಂದ ಪಿಡಿಒಗಳ ಜೊತೆ ಚರ್ಚಿಸಿ ಅವಶ್ಯಕತೆಗೆ ಅನುಗುಣವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಿ. ತಾಲೂಕಿನಲ್ಲಿ ಯಾವುದೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ಎಚ್ಚರ ವಹಿಸಿ ಮುಂಜಾಗೃತ ಕ್ರಮಕೈಗೊಳ್ಳಬೇಕು ಎಂದು ತಾಪಂ ಇಓ, ಜಿಪಂ ಎಇಇ ರುದ್ರವಾಡಿ ಇವರಿಗೆ ಸೂಚಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳಾದ ಅಗರಖೇಡ, ಸಿಂದಗಿ ರಸ್ತೆಗಳ ಅಗಲಿಕರಣ ಕಾಮಗಾರಿ ಕಳಪೆಯಾಗಿದ್ದು ಕಂಡು ಬಂದಿದೆ ಇನ್ನೊಮ್ಮೆ ರಸ್ತೆ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಪಿಡಬ್ಲುಡಿ ಅಧಿಕಾರಿ ಹಿರೇಮಠ ಅವರಿಗೆ ಸೂಚಿಸಿದರು.
ಉತ್ತರ ಕರ್ನಾಟಕದಲ್ಲಿ ಮಾದರಿ ಮಿನಿವಿಧಾನಸೌಧ ಎಂಬ ಹೆಗ್ಗಳಿಕೆ ಇದೆ ಆದರೆ ಇಲ್ಲಿ ಯಾರು ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಖೇಧಕರ ಸಂಗತಿ. ಸರಕಾರಿ ಕಟ್ಟಡಗಳು ಸಾರ್ವಜನಿಕರ ಆಸ್ತಿಯಾಗಿದ್ದು ಇದರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ಭಾವಿಸಿ ಅದನ್ನು ಬಿಟ್ಟು ಗುಟಕಾ, ತಂಬಾಕು ಸೇವಿಸಿ ಎಲ್ಲೆಂದರಲ್ಲಿ ಉಗುಳುವುದು ಸರಿಯಲ್ಲ. ಇಂತವರನ್ನು ಕಂಡು ಹಿಡಿದು ಕ್ರಮ ಜರುಗಿಸಿ ಎಂದು ತಹಸೀಲ್ದಾರ ಕುಲಕರ್ಣಿಯವರಿಗೆ ಸಲಹೆ ನೀಡಿದರು.
ಇಲ್ಲಿ ಕಛೇರಿ ಕೆಲಸ ಕಾರ್ಯಗಳಿಗಾಗಿ ಆಗಮಿಸುವ ವಯೋವೃದ್ಧರಿಗೆ ಮಹಡಿ ಹತ್ತಲು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ ಶಾಸಕರ ಅನುದಾನುದಾನದಲ್ಲಿ ವಯೋವೃದ್ಧರ ಅನುಕೂಲಕ್ಕಾಗಿ ಲಿಪ್ಟ್ ನಿರ್ಮಿಸಲು ಕ್ರಮಕೈಗೊಳುತ್ತೇನೆ ಇದರ ನಿರ್ವಹಣೆಯನ್ನು ತಾಲೂಕಾ ಆಡಳಿತ ಮಾಡಬೇಕು ಎಂದರು.
ಮಹಾರಾಷ್ಟ್ರ ಸರಕಾರ ಭೀಮಾನದಿಗೆ ನೀರು ಹರಿಸಿದ್ದಕ್ಕೆ ಅಭಿನಂದಿಸುವುದಾಗಿ ಹೇಳಿದ ಅವರು ಅದರಂತೆ ಏ.4 ಗಡುವಿನಂತೆ ಕಾಲುವೆಯ ಕೊನೆಯ ಹಂತದವರಿಗೆ ನೀರು ಹರಿಸಿದ್ದು ಕೆಬಿಜೆಎನ್ಎಲ್ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಕಾಲುವೆಗಳ ಮೂಲಕ ಹಳ್ಳ, ಕೊಳ್ಳ, ಕೆರೆಗಳಿಗೆ ನೀರು ಹರಿಸಬೇಕು ಎಂದು ರೈತರ ಬಹು ಬೇಡಿಕೆಯಾಗಿದೆ. ಮುಂಬರುವ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಾಗ ಎರಡು ಆಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹ ಮಟ್ಟ ಗಮನಿಸಿ ಮತ್ತೆ ಕಾಲುವೆಗಳಿಗೆ ನೀರು ಹರಿಸಲು ಮುಂದಾಗಬೇಕು ಎಂದು ಕೆಬಿಜೆಎನ್ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ ಅವರಿಗೆ ಹೇಳಿದರು.
ನಗರದ ಜನತೆಯ ಬಹು ನಿರೀಕ್ಷಿತ 27*7 ಕುಡಿಯುವ ನೀರು ನಿರ್ವಹಣೆಯಲ್ಲಿ ಯಾವುದೆ ತೊಂದರೆ ಕಂಡು ಬರಬಾರದು. ಒಂದು ವೇಳೆ ನೀರು ನಿರ್ವಹಣೆಯಲ್ಲಿ ನಗರ ಜನತೆಯಿಂದ ದೂರು ಬಂದರೆ ನಿಮ್ಮನ್ನೆ ಹೊಣೆಗಾರನ್ನಾಗಿ ಮಾಡುತ್ತೇನೆ ಎಂದು ವಾಟರ್ ಬೊರ್ಡ್ನ ಅಧಿಕಾರಿಗೆ ಸೂಚನೆ ನೀಡಿದರು.
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಲ್ಲಿ ಬರುವ ಅನುದಾನವನ್ನು ಆಯಾ ಇಲಾಖೆಯವರು ಸದ್ಭಳಕೆ ಮಾಡದೆ ಇರುವುದು ಕಂಡು ಬಂದರೆ ತಕ್ಷಣಕ್ಕೆ ಸಂಬಂಧಿಸಿದ ಅಧಿಕಾರಿಗೆ ಅಮಾನತು ಮಾಡುತ್ತಾರೆ. ಸರಕಾರ ಇದು ಅಟ್ರಾಸಿಟಿ ಪ್ರಕರಣ ಎಂದು ಭಾವಿಸುತ್ತದೆ ಹಾಗಾಗಿ ಯಾರು ನಿರ್ಲಕ್ಷ ಮಾಡಬೇಡಿ ಎಂದು ಎಲ್ಲಾ ಇಲಾಖಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಅರಣ್ಯ ಇಲಾಖೆಯವರು ಪಟ್ಟಣದಲ್ಲಿ ಗಿಡ ಮರಗಳನ್ನು ನೆಟ್ಟಿದ್ದಾರೆ. ಬೇಸಿಗೆ ಕಾಲ ಇರುವುದರಿಂದ ಇವುಗಳಿಗೆ ನೀರು ನಿರ್ವಹಣೆ ಮಾಡಬೇಕು. ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ವಾಹನ ಪಾರ್ಕಿಂಗ್ಗಾಗಿ ನಿಗದಿತ ಸ್ಥಳ ಗುರ್ತಿಸಿ ಮಾರ್ಕ ಮಾಡಿ, ಫೂಟ್ ಪಾತಗಳಲ್ಲಿ ಅಂಗಡಿ ಮುಂಗಟ್ಟು ಇಟ್ಟು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕಾರಣ ತೊಂದರೆಯಾಗದಂತೆ ನೊಡಿಕೊಳ್ಳಿ ಎಂದು ಪರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಇವರಿಗೆ ಹೇಳಿದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯ ಅರಿತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಹುಲ ಸಿಂದೆ, ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೊಟಿ, ತಾಪಂ ಇಓ ಸುನೀಲ ಮದ್ದಿನ, ತಹಸಿಲ್ದಾರ ಸಿ.ಎಸ್.ಕುಲಕರ್ಣಿ, ಪುಖ್ಯಾಧಿಕಾರಿ ಶಿವಾನಂದ ಪೂಜಾರಿ, ತಾಪಂ ಸಂಜಯ ಖಡಗೇಕರ, ಸಿಪಿಐ ರಾಜೆಶೇಖರ ಬಡದೇಸಾರ, ಮನೊಜಕುಮಾರ ಗಡಬಳ್ಳಿ, ಅರಣ್ಯಾಧಿಕಾರಿ ರಾಜೇಶ ಚವ್ಹಾಣ, ಅಬಕಾರಿ ನೀರಿಕ್ಷಕ ಪಡಸಲಗಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಸೇರಿದಂತೆ ಅನೇಕರು ಇದ್ದರು.