ತಾಳಿಕೋಟಿ

ಮನೆಗಳ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಮಹಿಳೆಯರ ಪ್ರತಿಭಟನೆ

ಮನೆಗಳ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಮಹಿಳೆಯರ ಪ್ರತಿಭಟನೆ


ತಾಳಿಕೋಟೆ22: ಪಟ್ಟಣದ ಪುರಸಭೆ ವತಿಯಿಂದ ಜಿ ಪ್ಲಸ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಿ ಕೊಡುವದಾಗಿ ಹಣ ತುಂಬಿಸಿಕೊಂಡು 5 ವರ್ಷ ಕಳೆದರೂ ಸಹಿತ ಮನೆಗಳ ನಿರ್ಮಾಣ ಮಾಡಿಲ್ಲ. ಕೂಡಲೇ ಮನೆಗಳ ನಿರ್ಮಾಣ ಮಾಡಿ, ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಪಟ್ಟಣದ ವಸತಿ ರಹಿತ ಮಹಿಳೆಯರು ಪುರಸಭೆ ಮುಂದೆ ದಿಢೀರ ಪ್ರತಿಭಟನೆಯನ್ನು ಕೈಕೊಂಡರು. 

ಜಿ ಪ್ಲಸ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಿ ಕೊಡುವದಾಗಿ 2017 ರಲ್ಲಿ ಸಾಮಾನ್ಯ ವರ್ಗದವರಿಂದ 50 ಸಾವಿರ ಮತ್ತು ಪರಿಶಿಷ್ಠ ವರ್ಗದವರಿಂದ 30 ಸಾವಿರ ಹಣವನ್ನು ತುಂಬಿಸಿಕೊಳ್ಳಲಾಗಿದೆ. ಸುಮಾರು 600 ಮನೆಗಳ ನಿರ್ಮಾಣ ಮಾಡಿ ಕೊಡುವದಾಗಿ ತಿಳಿಸಲಾಗಿತ್ತು. 5 ವರ್ಷ ಕಳೆದರು ಸಹಿತ ಯಾವುದೇ ಸುಳಿವು ಇಲ್ಲ. ನಾವು ಬಡ್ಡಿಯಲ್ಲಿ ದುಡ್ಡು ತಂದು ಹಣ ತುಂಬಲಾಗಿದೆ. ಇತ್ತ ಮನೆಯೂ ಇಲ್ಲ. ಮನೆ ಬಾಡಿಗೆ ಹಾಗೂ ಬಡ್ಡಿ ದುಡ್ಡು ತುಂಬುವದು ಕಷ್ಠವಾಗಿದೆ.  ಕನಿಷ್ಠ ಎಲ್ಲಿ ಮನೆಗಳ ನಿರ್ಮಾಣ ಮಾಡಲಾಗುವದು ಎನ್ನುವ ಸ್ಪಷ್ಠತೆಯೂ ಸಹ ಇಲ್ಲ. ಪುರಸಭೆ ಅಧಿಕಾರಿಗಳು ಕೇಳಿದರೆ ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ಮನೆಗಳ ನಿರ್ಮಾಣ ಎನ್ನುವದು ಗೊಂದಲದ ಗೂಡಾಗಿದೆ. ನಮ್ಮ ದುಡ್ಡು ಇಲ್ಲ. ಇತ್ತ ಮನೆಯೂ ಇಲ್ಲದಾಗುವ ಆತಂಕ ಮನೆ ಮಾಡಿದೆ. ಹಿರಿಯ ಅಧಿಕಾರಿಗಳು ಬಂದು ಮನೆಗಳ ನಿರ್ಮಾಣ ಕುರಿತು ಸ್ಪಷ್ಠ ನಿರ್ಧಾರ ತಿಳಿಸುವವರೆಗೂ ಪ್ರತಿಭಟನೆಯನ್ನು ಕೈ ಬಿಡುವದಿಲ್ಲ ಎಂದು ಪಟ್ಟು ಹಿಡಿದರು. ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಉಪಾಧ್ಯಕ್ಷ ಮುಸ್ತಫಾ ಚೌದ್ರಿ ತಿಳಿ ಹೇಳುವ ಪ್ರಯತ್ನ ಮಾಡಿದರು. ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು. ನಂತರ ಸದಸ್ಯ ವಾಸುದೇವ ಹೆಬಸೂರ, ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ, ಈಗಾಗಲೇ ಟಂಡರ್ ಕರೆದು ಕಾಮಗಾರಿ ಆರಂಭ ಮಾಡುವ ಸಮಯದಲ್ಲಿ ಗುತ್ತಿಗೆದಾರ ನಿಧನ ಹೊಂದಿದ ಹಿನ್ನಲೆಯಲ್ಲಿ ಕಾಮಗಾರಿ ಆರಂಭವಾಗಲಿಲ್ಲ. ಮತ್ತೆ ಟೆಂಡರ್ ಮಾಡುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ರಾಜೀವ ಗಾಂಧಿ ವಸತಿ ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಒಂದು ತಿಂಗಳ ಒಳಗೆ ಕಾಮಗಾರಿ ಆರಂಭಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ. ಹಿಗಾಗಿ ಪ್ರತಿಭಟನೆಯನ್ನು ಕೈ ಬಿಡಿ ಎಂದು ಮನವಿ ಮಾಡಿದರು. ನಂತರ ಹಿರಿಯ ಅಧಿಕಾರಿಗಳೊಂದಿಗೆ ಮೊಬೈಲ್‌ದಲ್ಲಿ ಪ್ರತಿಭಟನೆ ಸ್ಥಳದಲ್ಲಿಯೇ ಮಾಹಿತಿ ಪಡೆದುಕೊಂಡು ಪ್ರತಿಭಟನೆಯನ್ನು ಕೈಬಿಡಲಾಯಿತು. 

ಪುಷ್ಫಾ ಮಣೂರ, ಮಹಿರೂನಬಿ ಕೆಂಬಾವಿ, ಯಂಕಮ್ಮ ಕಟ್ಟಿಮನಿ, ಲಕ್ಷ್ಮೀಬಾಯಿ ಕೂಚಬಾಳ, ಹಸಿನಾ ಬೇಪಾರಿ, ರಾಜೇಶ್ವರಿ ವಟಗಾರ, ಸತ್ಯಮ್ಮ ಕಟ್ಟಿಮನಿ, ಮಮ್ತಾಜ ಕರದಾಳ, ಅಮಿನಬಿ ಶಹಾಪೂರಿ, ಮಾಲನಬಿ ಉಣ್ಣಿಭಾವಿ, ರುಕ್ಸಾನಾ ಮನಿಯಾರ, ಹುಲಗಮ್ಮ ಢವಳಗಿ, ಶಿವಮ್ಮ ಬಂಡಿಬಡ್ಡರ, ರಜಿಯಾಬೇಗಂ ರಾಯಚೂರ, ಭೀಮವ್ವ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ