ಬೆಳಗಾವಿ

ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು: ಡಾ. ನಯನಾ ಭಸ್ಮೆ ಕರೆ

ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು: ಡಾ. ನಯನಾ ಭಸ್ಮೆ ಕರೆ

ಸವದತ್ತಿ 21 : ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸಬೇಕು. ಮಹಿಳೆಯರು ಇಂದಿನ ಸಮಾಜದ ಪ್ರಮುಖ ಶಕ್ತಿಯಾಗಿದ್ದು, ಅವರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು ಎಂದು ಡಾ. ನಯನಾ ಭಸ್ಮೆ ಕರೆ ನೀಡಿದರು. ಇಲ್ಲಿನ ಗಾಂಧಿ ಚೌಕದಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ನವರಾತ್ರಿ ನಾಡಹಬ್ಬದ ಧಾರ್ಮಿಕ ಹಾಗೂ ಚಿಂತನ ಕಾರ್ಯಕ್ರಮವು ಅತ್ಯಂತ ಸಡಗರ, ಸಂಭ್ರಮ ಮತ್ತು ಅರ್ಥಪೂರ್ಣವಾಗಿ ಜರುಗಿತು. ಸಂಜೆ 7:00 ಗಂಟೆಗೆ ಶಕ್ತಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತದನಂತರ ಸುತಗಟ್ಟಿಯ ಬಸವೇಶ್ವರ ಭಜನಾ ಮಂಡಳಿಯವರಿಂದ ಜರುಗಿದ ಭಕ್ತಿಪೂರ್ವಕ ಭಜನಾ ಗಾಯನವು ನೆರೆದಿದ್ದ ನೂರಾರು ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ನಯನಾ ಭಸ್ಮೆ, ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ, ತಮ್ಮ ಸ್ವಂತ ಆರೋಗ್ಯದ ವಿಷಯದಲ್ಲಿ ಹಲವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಮಹಿಳೆಯರು ಆರೋಗ್ಯವಂತರಾಗಿದ್ದರೆ ಮಾತ್ರ ಕುಟುಂಬ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ. ನವರಾತ್ರಿಯ 9 ದಿನಗಳ ಕಾಲ ದೇವಿಯನ್ನು ಆರಾಧಿಸುವ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದರು. ಅಲ್ಲದೆ, ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಮತ್ತು ಅನ್ಯಾಯದ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಸವಿತಾ ಸಬನಿಸ, ಮಾತನಾಡಿದ ಅವರು ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಉತ್ತಮ ಆರೋಗ್ಯಕ್ಕಾಗಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ಇದೇ ವೇಳೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಕರಿಕಟ್ಟಿಯ ಸರಕಾರಿ ಮಾದರಿ ಶಾಲೆಯ ಸುಜಾತಾ ಜಂಗಣ್ಣವರ ಹಾಗೂ ರತ್ನಾ ಪವಾರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ನಂತರ ಧಾರವಾಡದ ದುರ್ಗಾ ಮೆಲೋಡಿಸ್ ಮಹಿಳಾ ತಂಡದಿಂದ ಜರುಗಿದ ರಸಮಂಜರಿ ಮನರಂಜನಾ ಕಾರ್ಯಕ್ರಮವು ಸಾರ್ವಜನಿಕರ ಮನಸೆಳೆಯಿತು. ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಪಲ್ಲವಿ ಪದಕಿ, ವಿಜಯಲಕ್ಷ್ಮೀ ಪಾಟೀಲ, ಪುಷ್ಪಾ ಮಮದಾಪೂರ, ಶೃತಿ ಬಸರಗಿ, ಕೀರ್ತಿ ಅಂತಕ್ಕನವರ ಸೇರಿದಂತೆ ಪ್ರಮುಖ ಪದಾಧಿಕಾರಿಗಳು, ಮುಖಂಡರು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ