ಮಹಿಳಾ ಮಾಸಿಕ ಸಂತೆ ಕಾರ್ಯಕ್ರಮ
ಬ್ಯಾಡಗಿ 13: ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿ, ಅವರು ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವುದಕ್ಕಾಗಿ ಸರ್ಕಾರ ಪಂಚಾಯಿತಿಗಳ ಮೂಲಕ ‘ಮಾಸಿಕ ಸಂತೆ’ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು. ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ತಾಲೂಕ ಪಂಚಾಯತ ಹಾಗೂ ಹಿರೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಆಯೋಜಿಸಿದ್ದ ಮಹಿಳಾ ಮಾಸಿಕ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಂತೆಗಳಲ್ಲಿ ಮಹಿಳಾ ಸಂಘಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗುಣಮಟ್ಟದ ಹಾಗೂ ಪರಿಶುದ್ಧವಾದ ಉತ್ಪನ್ನ ತಯಾರಿಸಿ ಉತ್ಪನ್ನಗಳ ಬಗ್ಗೆ ಪ್ರಚಾರವನ್ನೂ ಸಹ ಮಾಡಬೇಕು ಎಂದು ಸಲಹೆ ನೀಡಿದರಲ್ಲದೇ, ಗ್ರಾಪಂ ವ್ಯಾಪ್ತಿಯ 16 ಮಹಿಳಾ ಸ್ವಸಹಾಯ ಸಂಘಗಳಿಗೆ ಸರ್ಕಾರದ ವತಿಯಿಂದ ತಲಾ 1.50ಲಕ್ಷ ರೂಗಳಂತೆ ಸುಮಾರು 25ಲಕ್ಷ ರೂಗಳ ಬಂಡವಾಳ ನಿಧಿ ಚೆಕ್ಕುಗಳನ್ನು ವಿತರಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ, ಎನ್’ಆರ್’ಎಲ್’ಎಂ ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮಾಸಿಕ ಸಂತೆಯನ್ನು ಆರಂಭಿಸಲು ಸರ್ಕಾರ ಸೂಚಿಸಿದೆ. ಅದರಂತೆ ಗ್ರಾಮೀಣ ಮಟ್ಟದಲ್ಲಿ ಸಂತೆಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದರು.ಎನ್’ಆರ್’ಎಲ್’ಎಂ ವಲಯ ಮೇಲ್ವಿಚಾರಕ ಹನುಮಂತಪ್ಪ ಅಗಸಿಬಾಗಿಲ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್ಆರ್ಎಲ್ಎಂ) ಸಂಜೀವಿನಿ ಯೋಜನೆಯಡಿ ಆರ್ಥಿಕ ನೆರವು ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಈ ಸಂತೆಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಮಲ್ಲನಗೌಡ ಗಂಟಿಗೌಡ್ರ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ವೀರಭದ್ರ್ಪ ಗೊಡಚಿ, ಗದಿಗೆಮ್ಮ ಬಸನಗೌಡ್ರ, ಎನ್.ಎಫ್.ಹರಿಜನ, ಶಿವಾನಂದ ಕಡಗಿ, ಸಿದ್ದಯ್ಯ ಪಾಟೀಲ, ದ್ಯಾಮನಗೌಡ ಪೂಜಾರ, ಮಹಿಳಾ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ಬಣಕಾರ, ಕಾರ್ಯಕ್ರಮ ವ್ಯವಸ್ಥಾಪಕ ಗುಡ್ಡಪ್ಪ ಡಮ್ಮಣ್ಣನವರ, ಸಂತೋಷ ಚಲುವಾದಿ, ಹೇಮಾ ಬಸನಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.