ತಾಳಿಕೋಟಿ

ಈ ವಾರ್ಡ್‌ ರಸ್ತೆ ದುರಸ್ತಿ ಯಾವಾಗ ಸ್ವಾಮಿ?

ಈ ವಾರ್ಡ್‌ ರಸ್ತೆ ದುರಸ್ತಿ ಯಾವಾಗ ಸ್ವಾಮಿ?

ತಾಳಿಕೋಟಿ 05: ಪಟ್ಟಣದ ವಾರ್ಡ್‌ ಸಂಖ್ಯೆ 6 ಹಾಗೂ 8 ರಲ್ಲಿ ಬರುವ ತಾಲೂಕಾ ಪಂಚಾಯತ ಕಾರ್ಯಾಲಯದ ಪಕ್ಕದ(ಡಿಎಲ್‌ಬಿ) ಸಂಪರ್ಕ ರಸ್ತೆ ಹಾಳಾಗಿ ಹದಗೆಟ್ಟು ಸಾರ್ವಜನಿಕರು ಪರದಾಡುವಂಥಹ ಸ್ಥಿತಿ ನಿರ್ಮಾಣವಾಗಿದೆ. 

ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ನಿರಂತರವಾಗಿ ಸುರಿಯುತ್ತೀರುವ ಮಳೆಯಿಂದಾಗಿ ಕೆಲವು ವಾರ್ಡಗಳ ರಸ್ತೆಗಳು ಹಾಳಾಗಿ ಚರಂಡಿಗಳಿಂದ ನೀರು ಹರಿಯದೇ ರಸ್ತೆಯ ಮೇಲೆ ಹರಿದು ಹಾಗೂ ಮಳೆನೀರು ಸಂಗ್ರಹವಾಗಿ ಕಚ್ಚಾ ರಸ್ತೆಗಳು ಕೆಸರಿನಗದ್ದೆಯಂತಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಇಲ್ಲಿಂದ ಸಂಚರಿಸಲು ಹರಸಾಹಸ ಪಡಬೇಕಾಗಿದೆ.  

ವಾರ್ಡ್‌ ಸಂಖ್ಯೆ 6 ಮತ್ತು 8ರಲ್ಲಿ ಬರುವ ಈ ರಸ್ತೆ (ಶಾರದಾದೇವಿ ಮಹಿಳಾ ಸೊಸಾಯಿಟಿಯಿಂದ ಮುಖ್ಯ ಸಂಪರ್ಕ ರಸ್ತೆಯವರೆಗೆ) ಕಚ್ಚಾ ರಸ್ತೆಯಾಗಿದ್ದು, ಇಲ್ಲಿಯವರೆಗೂ ದುರಸ್ತಿ ಆಗಿಲ್ಲ. ಈ ರಸ್ತೆ ತಾಲೂಕಾ ಪಂಚಾಯಿತಿಗೆ ಬರುವ ಸಾರ್ವಜನಿಕರಿಗೆ ಒಂದು ಮುಖ್ಯ ರಸ್ತೆಯಾಗಿದ್ದು ಇಲ್ಲಿಂದ ಪ್ರತಿ ದಿನ ನೂರಾರು ವಾಹನಗಳು ಸಂಚರಿಸುತ್ತವೆ, ಜೊತೆಗೆ ಇಲ್ಲಿ ಸಮೀಪದಲ್ಲಿಯೇ ಮಹಿಳೆಯರ ಶೌಚಾಲಯ ಇರುವುದರಿಂದ ಎಷ್ಟೋ ಬಾರಿ ವಯೋವೃದ್ಧರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರಿಗಂತೂ ಈ ರಸ್ತೆಯ ಸಂಚಾರ ಸವಾಲಾಗಿ ಪರಿಣಮಿಸಿದೆ. ಈಗ ಮಳೆಗಾಲವಿರುವುದರಿಂದ ರಸ್ತೆಯ ನಿರ್ಮಾಣ ಕಷ್ಟಸಾಧ್ಯವಾದರೂ ಕನಿಷ್ಟ ಪಕ್ಷ ದುರಸ್ತಿಯಾದರೂ  ಮಾಡಿದರೆ ಸಾರ್ವಜನಿಕರಿಗೆ ಅನಕೂಲವಾಗುತ್ತದೆ. ಎಂದು ತಿಳಿಸುತ್ತಾರೆ ಇಲ್ಲಿಯ ವಾರ್ಡ್‌ ನಿವಾಸಿ ಸುಭಾಸ ಮಹೀಂದ್ರಕರ. 

ಇನ್ನಾದರೂ ಪುರಸಭೆಯ ಅಧಿಕಾರಿ ಹಾಗೂ ಈ ಎರಡೂ ವಾರ್ಡಗಳ ಸದಸ್ಯರು ಈ ಗಂಭೀರ ಸಮಸ್ಯೆಯ ಪರಿಹಾರಕ್ಕಾಗಿ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ. ಇಲ್ಲದೆ ಹೋದಲ್ಲಿ ಇದು ಸಾರ್ವಜನಿಕರ ತೀವ್ರ  ಆಕ್ರೋಶಕ್ಕೆ ಕಾರಣವಾಗಬಹುದಾಗಿದೆ. 


ಸುದ್ದಿ ಓದಿ