ಜಲ, ನೆಲ ವಿಷಯ ಬಂದಾಗ ಕನ್ನಡಿಗರೆಲ್ಲ ಒಂದು : ಪಂಚನಗೌಡ ದ್ಯಾಮನಗೌಡರ
ಯರಗಟ್ಟಿ 29: ಕಾವೇರಿ ನೀರಿಗಾಗಿ ನಡೆದ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಪಂಚಲಿಂಗೇಶ್ವರ ಕ್ರಾಸ್ದ ರಾಜ್ಯ ಹೆದ್ದಾರಿಯನ್ನು ಕೆಲ ಸಮಯ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದರು. ರೈತ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ ಹಿಂದೆ ಮಹಾದಾಯಿ ಹೋರಾಟಕ್ಕೆ ಬೆಂಗಳೂರು, ಮೈಸೂರು ಭಾಗದ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿದ್ದವು. ಈಗ ಕಾವೇರಿ ಹೋರಾಟಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ. ಜಲ, ಗಡಿ ವಿಷಯ ಬಂದಾಗ ನಾವೆಲ್ಲ ಕನ್ನಡಿಗರು ಒಂದಾಗಿ ಹೋರಾಟ ಮಾಡಿ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಕಾವೇರಿ, ಮಹದಾಯಿ ಸೇರಿದಂತೆ ಅನೇಕ ಜಲಸಮಸ್ಯೆಗಳ ಕುರಿತು ರೈತರಲ್ಲಿ ಜಾಗೃತಿ ಉಂಟುಮಾಡಿ, ರೈತರೊಡಗೂಡಿ ತೀವ್ರ ತೆರನಾದ ಹೋರಾಟ ಮಾಡಲಾಗುವುದು ಎಂದರು.
ಕಳಸಾ ಬಂಡೂರಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಒಬ್ಬರು ಮತ್ತೊಬ್ಬರ ಮೇಲೆ ಆಪಾದನೆ ಮಾಡುತ್ತ ಕಾಲ ಕಳೆಯದೇ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜಲ ಸಮಸ್ಯೆಯನ್ನು ನ್ಯಾಯಾಧೀಕರಣದ ಹೊರಗಿಟ್ಟು ಸಂಕಷ್ಟ ಸೂತ್ರದಿಂದ ಬಗೆ ಹರಿಸುವಂತಾಗಬೇಕು. ಅತೀವೃಷ್ಟಿಯಿದ್ದಾಗ, ಅನಾವೃಷ್ಟಿಯಿದ್ದಾಗ ನೀರಿನ ನಿರ್ವಹಣೆ ಹೇಗಿರಬೇಕು ಎನ್ನುವ ಕುರಿತು ಸೂಕ್ತ ನಿರ್ದೇಶನ ನೀಡಬೇಕು.
ಇದೇ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಎತ್ತಕ್ಕೇರಿಸುವ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಬೇಕೆಂದು ಆಗ್ರಹಿಸಿದರು. ರೈತ ಮುಖಂಡರಾದ ನಿಂಗನಗೌಡ ಮಲಗೌಡ್ರ, ಪಂಚಪ್ಪ ಹನಸಿ, ರವಿ ದ್ಯಾಮನಗೌಡರ, ಅರುಣಗೌಡ ಪಾಟೀಲ, ರವಿ ಹುರಳಿ, ಬಾಳಪ್ಪ ಮೇಟಿ, ಪಿ.ಸಿ.ಅಷ್ಟಗಿಮಠ, ಕಳಸನಗೌಡ್ರ, ರಾಮನಗೌಡ ಗೀದಿಗೌಡ್ರ, ಅಪ್ಪು ನುಗ್ಗಾನಟ್ಟಿ, ರಾಜು ಘಟವಾಳಿಮಠ, ಅಶೋಕ ಹಾದಿಮನಿ, ಬಸವರಾಜ ಹನಸಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಇದ್ದರು.