ವೀಕೆಂಡ್ ಲಾಕ್ಡೌನ್ : ಉ.ಕ ಜಿಲ್ಲೆಯಲ್ಲಿ ಯಶಸ್ವಿ ;
ಬೆಳಗಿನ 6 ರಿಂದ 10 ರವರೆಗೆ ತರಕಾರಿಕೊಳ್ಳಲು ಮುಗಿಬಿದ್ದ ಜನ, ಮಾಸ್ಕ ಧರಿಸಿದ್ದರು ; ಸಾಮಾಜಿಕ ಅಂತರವಿರಲಿಲ್ಲ
ಕಾರವಾರ 25: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವೀಕೆಂಡ್ ಲಾಕ್ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ತಾಕೀತು ಮಾಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಸೇರಿದಂತೆ ಇತರೆ ತಾಲೂಕಾ ಕೇಂದ್ರಗಳಲ್ಲಿ ಲಾಕ್ ಡೌನ್ ಎರಡನೇ ದಿನವೂ ಯಶಸ್ವಿಯಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ತರಕಾರಿ ಸೇರಿದಂತೆ ಜೀವನಾವಶ್ಯಕ ವಸ್ತುಗಳಾದ ಹಾಲು, ಮೀನು, ರೇಶನ್ ಖರೀದಿಸಲು ಇದ್ದ ಅವಕಾಶವನ್ನು ಸಾರ್ವಜನಿಕರು ಬಳಸಿಕೊಂಡರು. ತರಕಾರಿ ಕೊಳ್ಳಲು ಜನರ ಜಾತ್ರೆಯೇ ನೆರೆದಿತ್ತು. ನಗರದ ಮಹಾತ್ಮ ಗಾಂಧಿ ರಸ್ತೆ, ಸಿವಿಲ್ ಕೋರ್ಟ ರಸ್ತೆಯಲ್ಲಿ ತರಾಕಾರಿ ಖರೀದಿಸಿದ ಜನ ಮಾಸ್ಕ ಧರಿಸಿದ್ದರೂ, ಸಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಸಾಮಾಜಿಕ ಕಾಯ್ದುಕೊಳ್ಳುವಂತೆ ಎಚ್ಚರಿಸಲು ಕೆಲಸವನ್ನು ನಗರಸಭೆಯ ಸಿಬ್ಬಂದಿ ಮಾಡಲಿಲ್ಲ. ಪೊಲೀಸರು ಸಹ ತರಕಾರಿ ಖರೀಸುವವರನ್ನು ನಿಯಂತ್ರಿಸಲಿಲ್ಲ. ಆದರೆ ಹತ್ತು ಗಂಟೆಯಾಗುತ್ತಿದ್ದಂತೆ ತರಕಾರಿ ಮಾರುವವರನ್ನು ಗುಂಟುಮೋಟೆ ಕಟ್ಟುವಂತೆ ನಗರಸಭೆಯ ಸಿಬ್ಬಂದಿ ತಾಕೀತು ಮಾಡಿದರು. ರಸ್ತೆಯಲ್ಲಿದ್ದ ಜನರನ್ನು ತಕ್ಷಣ ಮನೆಗೆ ತೆರಳುವಂತೆ ಧ್ವನಿವರ್ಧಕದ ಮೂಲಕ ಆಗ್ರಹಿಸಲಾಯಿತು.
ನಗರದಲ್ಲಿ ಅಗತ್ಯ ವಸ್ತು ಮಾರಾಟಕ್ಕೆ ತೆಗೆದಿದ್ದ ಅಂಗಡಿಗಳನ್ನು ಬಂದ್ ಮಾಡಿಸುತ್ತಾ ನಗರಸಭೆಯ ಸಿಬ್ಬಂದಿ ರಸ್ತೆಯಲ್ಲಿ ನಡೆದರು. ಹಾಲು, ಮೀನು ಮಾರಾಟ ಸಹ 10.30ಕ್ಕೆ ಪೂರ್ಣ ಬಂದಾಯಿತು. ಜನರಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು ಕ್ಷಣಾರ್ಧದಲ್ಲಿ ಖಾಲಿ ಖಾಲಿಯಾದವು. ಇಡೀ ನಗರ ಮತ್ತೆ ಬಿಕೋ ಎನ್ನತೊಡಗಿತು. ಯುದ್ಧದ ನಂತರದ ಸನ್ನಿವೇಶ ಕಂಡು ಬಂತು. ಓಷಧಿ ಅಂಗಡಿ ಹೊರತು ಪಡಿಸಿ ಎಲ್ಲಾ ಅಂಗಡಿಗಳ ಶೆಟರ್ ಕ್ಲೋಜ್ ಆದವು. ಪೊಲೀಸ ವಾಹನಗಳ ಗಸ್ತು ಆರಂಭವಾಯಿತು. ವಾಹನದ ಸೈರನ್ ಕೇಳುತ್ತಿದ್ದಂತೆ ಜನರು ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡರು.
ಜಿಲ್ಲೆಯ ಪ್ರಮುಖ ನಗರಗಳಾದ ಶಿರಸಿ, ಕುಮಟಾ,ಅಂಕೋಲಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ದಾಂಡೇಲಿ, ಹಳಿಯಾಳ, ಜೊಯಿಡಾ, ಮುಂಡಗೋಡ, ಯಲ್ಲಾಪುರಗಳಲ್ಲಿ ಸಹ ಎರಡನೇ ದಿನದ ಲಾಕ್ ಡೌನ್ ಯಶಸ್ವಿಯಾದ ಬಗ್ಗೆ ಜಿಲ್ಲಾ ಕೇಂದ್ರಕ್ಕೆ ವರದಿಗಳು ಬಂದವು. ಕೋವಿಡ್ ಜಾಗೃತಿ ಹೆಚ್ಚಿದ್ದು, ಜನರು ಅಗತ್ಯ ಕೆಲಸಗಳಿಗೆ ಮಾತ್ರ ಮನೆಗಳಿಂದ ಹೊರ ಬರುತ್ತಿದ್ದಾರೆ. ಅಲ್ಲದೇ ಆಸ್ಪತ್ರೆ, ಓಷಧಿ ಅಂಗಡಿಗೆ ತೆರಳುವವರು ಮಾತ್ರ ರಸ್ತೆಗಳಲ್ಲಿ ಅಲ್ಲಲ್ಲಿ ಕಂಡು ಬಂದರು.
ಗ್ರಾಮಾಂತರ ಭಾಗದಲ್ಲಿ ನಡೆದ ಮದುವೆಗಳು :
ಶಿರಸಿ ಕಲಕರಡಿ ಭಾಗ ಸೇರಿದಂತೆ ಕೆಲ ಗ್ರಾಮಾಂತರ ಭಾಗದಲ್ಲಿ ಮದುವೆಗಳಿದ್ದು, ಅಲ್ಲಿ ಸಹ ಜನರಿಗೆ ಜಾಗೃತಿ ಮೂಡಿಸಲು 50 ಕ್ಕಿಂತ ಜನ ಹೆಚ್ಚು ಸೇರದಂತೆ ಎಚ್ಚರಿಕೆ ನೀಡಲಾಯಿತು. ಮದುವೆ ಮನೆಯಲ್ಲಿ ವಧುವರರ ಆರ್ಶೀವದಿಸಲು ಬರುವವರು ಸರದಿಯಲ್ಲಿ ಬಂದು ಊಟ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಲಾಯಿತು. ಮೊದಲು ಬಂದ 50 ಜನ ಊಟ ಮಾಡಿ ತೆರಳಿದ ಮೇಲೆ, ನಂತರ ಎರಡನೇ ಕಂತಿನಲ್ಲಿ 50 ಜನ ಆಗಮಿಸಿ, ನೂತನ ಜೋಡಿಗಳನ್ನು ಹರಸಿ, ಊಟ ಮಾಡಿ ಹೋದರು. ಅಲ್ಲದೇ ಬೆಂಗಳೂರು ಮತ್ತು ಮಹಾರಾಷ್ಟ್ರದಿಂದ ಬಂದವರಿಗೆ ಮದುವೆಗೆ ಬಾರದಿರಲು ವಿನಂತಿಸಲಾಯಿತು. ಅಲ್ಲದೇ ನೇರ ಶಿರಸಿಗೆ ತೆರಳಿ ಕೋವಿಡ್ ಟೆಸ್ಟ ಮಾಡಿಸಿಕೊಂಡೇ ಮನೆಗೆ ತೆರಳಲು ಸೂಚನೆ ನೀಡುವ ವ್ಯವಸ್ಥೆ ಸಹ ಮಾಡಲಾಗಿತ್ತು.
ಕಸಾಪ ಚುನಾವಣಾ ಮತ ಪ್ರಚಾರ :
ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಪ್ರಚಾರಕ್ಕೆ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಬಂದ ಅಭ್ಯರ್ಥಿಯೋರ್ವರಿಗೆ ಮನೆ ಬಾಗಿಲಿಗೆ ಬರದಂತೆ ತಡೆದ ಘಟನೆ ಹಳಿಯಾಳ, ಜೊಯಿಡಾ, ಯಲ್ಲಾಪುರ ಭಾಗದಲ್ಲಿ ನಡೆದಿದೆ. ಕೋವಿಡ್ ಇರುವ ಕಾರಣ ಮನೆ ಮನೆಗೆ ಬರುವುದು ಬೇಡ. ಅಭ್ಯರ್ಥಿಗಳ ಹಿನ್ನೆಲೆ ತಿಳಿದಿದೆ. ನಾವು ನಿಮಗೆ ಮತ ಹಾಕುತ್ತೇವೆ. ಮನೆಗೆ ಮಾತ್ರ ಬರುವುದು ಬೇಡ ಎಂದು ಮುಖದ ಮೇಲೆ ಹೇಳಿ ಕಳಿಸಿದ ಘಟನೆ ಸಹ ಶನಿವಾರ ಹಾಗೂ ರವಿವಾರ ನಡೆದಿದೆ.
ರಸ್ತೆಯ ಸರ್ಕಲ್ಗಳಲ್ಲಿ ಪೊಲೀಸರ ಸರ್ಪಗಾವಲು:
ಕಾರವಾರ ನಗರ ಸೇರಿದಂತೆ ಜಿಲ್ಲೆಯ ತಾಲೂಕಾ ಕೇಂದ್ರಗಳಲ್ಲಿ ಪೊಲೀಸರ ಸರಾ್ಗವಲು ಹೆಚ್ಚಿದೆ. ಯಾವುದೇ ಹೊರ ರಾಜ್ಯದ ವಾಹನ ಬರಲಿ, ಅದನ್ನು ವಿಚಾರಿಸಿ, ಕೋವಿಡ್ ಟೆಸ್ಟ ಮಾಹಿತಿ ಕೇಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೋವಿಟ್ ಟೆಸ್ಟ ಇಲ್ಲದೇ ಹೋದರೆ ನೇರ ಆಸ್ಪತ್ರೆಗಳಿಗೆ ತೆರಳಿ ಕೋವಿಡ್ ಟೆಸ್ಟ ಮಾಡಿಸಿಕೊಂಡು ತೆರಳುವಂತೆ ಸೂಚಿಸಲಾಗುತ್ತಿತ್ತು.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ :
ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕಾರವಾರ ಕ್ರಿಮ್ಸ ಮತ್ತು ತಾಲೂಕಾ ಕೇಂದ್ರಗಳಲ್ಲಿ ಅಮ್ಲಜನಕದ ಕೊರತೆ ಅಥವಾ ಬೆಡ್ ಕೊರತೆ ಜಿಲ್ಲೆಯಲ್ಲಿ ಈತನಕ ಆಗಿಲ್ಲ ಎಂದು ಕ್ರಿಮ್ಸ ಸ್ಪಷ್ಟಪಡಿಸಿದೆ. ಆರೋಗ್ಯ ಸಂಬಂಧಿ ಸಾಮಾಗ್ರಿ, ಓಷಧಿ ಖರೀದಿಸಲು ಸಾಕಷ್ಟು ಹಣ ಇದೆ ಎಂದು ಜಿಲ್ಲಾಡಳಿತ ಇದೇ ವೇಳೆ ಹೇಳಿದೆ.