ಬ್ಯಾಡ್ಗಿ

ಮಕ್ಕಳನ್ನು ಕೋವಿಡ್ನಿಂದ ರಕ್ಷಿಸುವ ಕೆಲಸ ಮಾಡಲಾಗುವುದು: ರುದ್ರಮುನಿ

ಮಕ್ಕಳನ್ನು ಕೋವಿಡ್ನಿಂದ ರಕ್ಷಿಸುವ ಕೆಲಸ ಮಾಡಲಾಗುವುದು: ರುದ್ರಮುನಿ

ಬ್ಯಾಡಗಿ 26: ತಾಲೂಕಿನಲ್ಲಿರುವ 16 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ದಾಖಲೆಗಳನ್ನು ನಿರ್ವಹಿಸುವ ಜೊತೆಗೆ ಮುಂದಿನ ಮೂರು ತಿಂಗಳವರೆಗೆ ಅವರಿಗೆ ಬೇಕಾದ ಪೌಷ್ಠಿಕ ಆಹಾರ, ಓಷಧಗಳನ್ನು ಒದಗಿಸುವ ಮೂಲಕ ಅವರನ್ನು ಆರೋಗ್ಯ ಸದೃಢರನ್ನಾಗಿಸಿ ಕೋವಿಡ್ನಿಂದ ರಕ್ಷಿಸುವ ಕೆಲಸ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ರುದ್ರಮುನಿ ಹೇಳಿದರು.ತಾಲೂಕಿನ ಮೋಟೆಬೆನ್ನೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ನಡೆದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗಾಗಿ ರಾಜ್ಯದಲ್ಲೇ ಪ್ರಥಮವಾಗಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಪಾಸಣೆಗೆ ಒಳಗಾದ ಎಲ್ಲ ಮಕ್ಕಳ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುವುದು. ಮೂರನೇ ಅಲೆಯ ಪರಿಣಾಮ ಕ್ಷೀಣಿಸುವವರೆಗೂ ಅವರಿಗೆ ಅಗತ್ಯ ವೈದ್ಯಕೀಯ ಉಪಚಾರದ ನಿರ್ವಹಣೆ ಮೂಲಕ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್‌.ಬಾರ್ಕಿ ಮಾತನಾಡಿ, ಮಕ್ಕಳಿಗೆ ಆರೋಗ್ಯದ ರಕ್ಷಣೆ ಮಾಡಲು ಸುವರ್ಣ ಆರೋಗ್ಯ ಚೈತನ್ಯ ಯೋಜನೆಯಡಿ ಆರೋಗ್ಯದ ರಕ್ಷಾ ಕವಚದಂತೆ ಈ ಶಿಬಿರವನ್ನು ಆರಂಭಿಸಲಾಗಿದ್ದು, ತಾಲೂಕಿನ ಐದು ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರಾರಂಭಿಸಲಾಗಿದೆ.

ಪ್ರಥಮ ದಿನವಾದ ಇಂದು ತಾಲೂಕಿನ ಮೋಟೆಬೆನ್ನೂರ ಕೇಂದ್ರದಲ್ಲಿ 421, ಕಾಗಿನೆಲೆ ಕೇಂದ್ರದಲ್ಲಿ 196, ಕದರಮಂಡಲಗಿ ಕೇಂದ್ರದಲ್ಲಿ 176, ಚಿಕ್ಕಬಾಸೂರ ಕೇಂದ್ರದಲ್ಲಿ 183 ಹಾಗೂ ಬ್ಯಾಡಗಿ ಪಟ್ಟಣದಲ್ಲಿ 53 ಮಕ್ಕಳಿಗೆ ಸೇರಿದಂತೆ 1029 ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ ಎಂದರಲ್ಲದೇ ತಪಾಸಣೆಯ ಸಂದರ್ಭದಲ್ಲಿ ಅಪೌಷ್ಠಿಕತೆಯಿಂದ ಬಳಲುವ ಪೌಷ್ಠಿಕ ಆಹಾರ ಕಿಟ್, ಪ್ರೋಟಿನ್ ಸೇರಿದಂತೆ ರೋಗನಿರೋಧ ಶಕ್ತಿ ಹೆಚ್ಚಿಸುವ ಪೂರಕ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಬಾಕ್ಸ್‌.....ಕೋವಿಡ್ ಮೂರನೇ ಅಲೆಯ ಪ್ರಭಾವದಿಂದ ಮಕ್ಕಳನ್ನು ರಕ್ಷಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದ್ದು, ಮಕ್ಕಳಿಗೆ ಸಣ್ಣ ಜ್ವರ, ಶೀತ ಕಂಡು ಬಂದರೂ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕು. ಮುಂದಿನ ಮೂರು ತಿಂಗಳವರೆಗೆ ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಬೇರೆಯವರ ಮನೆಗೆ ಮಕ್ಕಳನ್ನು ಕಳುಹಿಸಬೇಡಿ. ಶಿಕ್ಷಕರು ಸಹ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಚಿಕಿತ್ಸೆಗೆ ನೆರವು ಪಡೆಯಬೇಕು..ಡಾ.ಸುಹೀಲ್ ಹರವಿತಾಲೂಕಾ ಆರೋಗ್ಯಾಧಿಕಾರಿ ಬ್ಯಾಡಗಿ. 


ಸುದ್ದಿ ಓದಿ