ಗೋಕಾಕ್

ವಿರೋಧಿಗಳಿದ್ದರೆ ಮಾತ್ರ ನಾವು ಜಾಣರಾಗುತ್ತೇವೆ: ಸತೀಶ ಜಾರಕಿಹೊಳಿ

ವಿರೋಧಿಗಳಿದ್ದರೆ ಮಾತ್ರ ನಾವು ಜಾಣರಾಗುತ್ತೇವೆ: ಸತೀಶ ಜಾರಕಿಹೊಳಿ

ಯಮಕನಮರಡಿ 30: ಇತ್ತೀಚೆಗೆ ಜರುಗಿದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಮತಕ್ಷೇತ್ರದಿಂದ 4ನೇ ಬಾರಿ ಆಯ್ಕೆಯಾಗಿ ಕರ್ನಾಟಕದಲ್ಲಿ ದಾಖಲೆ ಮಾಡಿದ ನುರಿತ ರಾಜಕಾರಣಿ ಎಂದೇ ಹೆಸರುವಾಸಿಯಾದ ಲೋಕೋಪಯೋಗಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ತಮ್ಮದೇ ಆದ ಮೀಸಲು ಕ್ಷೇತ್ರ ಯಮಕನಮರಡಿಗೆ ದಿ. 29 ರಂದು ಭೇಟಿ ನೀಡಿ ಅಪಾರ ಅಭಿಮಾನಿಗಳಿಂದ ಸಚಿವ ಸತೀಶ ಜಾರಕಿಹೊಳಿ ಮತ್ತು ಪುತ್ರ ರಾಹುಲ ಜಾರಕಿಹೊಳಿಯವರು ಸನ್ಮಾನ ಸ್ವೀಕರಿಸಿದರು. 

ನಂತರ ಮಾತನಾಡಿದ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ವಿರೋಧಿಗಳು ಇದ್ದೇ ಇರುತ್ತಾರೆ. ಅಂತಹವರಿಗೆ ಹೆದರದೇ ತಮ್ಮ ಕಾಯಕವನ್ನು ಬಿಡದೇ ಮುಂದುವರೆಯಬೇಕು. ರಾಜ್ಯ ಚುನಾವಣೆ ಪ್ರಾರಂಭದಿಂದ ಮುಗಿಯುವವರೆಗೆ ನಮ್ಮ ವಿರೋಧಿಗಳಾದ ಬಿಜೆಪಿ ಪಕ್ಷದ ಅನೇಕ ಮುಖಂಡರು ಹಾಗೂ ಸಾಹಿತಿಗಳಾದ ಸೂಲಿಬೆಲಿ ಸಹಿತ ನಮ್ಮ ವಿರುದ್ಧ ಸಾಕಷ್ಟು ಅಪಪ್ರಚಾರ ಮಾಡಿದರು. ಆದರೆ ಮತದಾರರು ನಮ್ಮ ಕೈ ಬಿಡಲಿಲ್ಲ. ನಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮರೆಯುವಂತಿಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಹೆಚ್ಚಿಗೆ ಮತ ನೀಡಿ ಸುಮಾರು 60 ಸಾವಿರ ಮತಗಳ ಅಂತರದಿಂದ ನನ್ನನ್ನು 4ನೇ ಬಾರಿಗೆ ಆಯ್ಕೆ ಮಾಡಿಕೊಟ್ಟಿದ್ದಾರೆ. ಕಾರಣ ನನ್ನ ಕ್ಷೇತ್ರದ ಎಲ್ಲ ಮತದಾರರಿಗೂ ಚಿರರುಣಿಯಾಗಿದ್ದೇನೆ. ಅಲ್ಲದೇ ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಯೋಜನೆ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.  

ಅಂದು ರಾಷ್ಟ್ರೀಯ ಹೆದ್ದಾರಿ ದಾದಬಾನಹಟ್ಟಿ ತೆರೆದ ವಾಹನದಲ್ಲಿ ಭವ್ಯ ರೋಡ್ ಶೋ ಆಯೋಜಿಸಲಾಗಿತ್ತು. ನಂತರ ಸ್ಥಳೀಯ ಹುಣಸಿಕೊಳ್ಳಮಠದ ಆವರಣದಲ್ಲಿ ಹಾಕಿದ ಭವ್ಯ ವೇದಿಕೆಯಲ್ಲಿ ಸಚಿವರು ಮಾತನಾಡಿದರು. ಪ್ರಾರಂಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರವೀಂದ್ರ ಜಿಂಡ್ರಾಳಿ ಸ್ವಾಗತಿಸಿದರು. ಕಿರಣಸಿಂಗ ರಜಪೂತ ನಿರೂಪಿಸಿದರು. ಬ್ಲಾಕ್ ಅಧ್ಯಕ್ಷ ಮಹಾಂತೇಶ ಮಗದುಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಅಭಿನಂದನಾ ಸಮಾರಂಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾ.ಜಿ,ಪಂ. ಸದಸ್ಯ ಮಂಜುನಾಥ ಪಾಟೀಲ, ಈರಣ್ಣಾ ಬಿಸಿರೊಟ್ಟಿ, ದಸ್ತಗೀರ ಬಸ್ಸಾಪುರಿ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದು ಅಪಾರ ಅಭಿಮಾನಿಗಳಿಂದ ಸನ್ಮಾನ ಜರುಗಿತು. ಸ್ಥಳೀಯ ಪತ್ರಕರ್ತರಾದ ಗೋಪಾಲ ಚಿಪಣಿ, ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಜೊತೆಗೆ ಪತ್ರಿಕಾ ಬಳಗವು ಸಹ ಉಪಸ್ಥಿತರಿದ್ದರು. 


ಸುದ್ದಿ ಓದಿ