ಕೊಪ್ಪಳ

ರಾಷ್ಟ್ರದ ಸೌಹಾರ್ದತೆ ಮತ್ತು ಸಮಾನತೆಗೆ ನಾವೆಲ್ಲರೂ ಜಾಗೃತರಾಗಬೇಕಿದೆ - ಬಸವರಾಜ್ ಶೀಲವಂತರ್

ರಾಷ್ಟ್ರದ ಸೌಹಾರ್ದತೆ ಮತ್ತು ಸಮಾನತೆಗೆ ನಾವೆಲ್ಲರೂ ಜಾಗೃತರಾಗಬೇಕಿದೆ - ಬಸವರಾಜ್ ಶೀಲವಂತರ್

ರಾಷ್ಟ್ರದ ಸೌಹಾರ್ದತೆ ಮತ್ತು ಸಮಾನತೆಗೆ ನಾವೆಲ್ಲರೂ ಜಾಗೃತರಾಗಬೇಕಿದೆ - ಬಸವರಾಜ್ ಶೀಲವಂತರ್ 


ಕೊಪ್ಪಳ 04: ದೇಶದಲ್ಲಿ ಪ್ರತಿಯೊಬ್ಬರೂ ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ರಾಷ್ಟ್ರದ ಸೌಹಾರ್ದತೆ ಮತ್ತು ಸಮಾನತೆಯನ್ನು ಕಾಪಾಡಿಕೊಳ್ಳಲು ಜಾಗೃತರಾಗಬೇಕಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ಕರೆ ನೀಡಿದರು.ನಗರದ ಶಾದಿ ಮಹಲ್ನಲ್ಲಿ ಕೊಪ್ಪಳ ಜಿಲ್ಲಾ ಪಾಸ್ಟರ್ಸ್‌ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಕ್ರೈಸ್ತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮುಂದುವರೆದು ಮಾತನಾಡಿ ಗಾಂಧೀಜಿಯವರ ಮಾನವತಾವಾದಿ ತತ್ವಗಳನ್ನು ಸ್ಮರಿಸಿ,ಬೈಬಲ್ ಕ್ರಿಶ್ಚಿಯನ್ನರ ಧರ್ಮ ಗ್ರಂಥ. ಖುರ್ ಆನ್ ಮುಸ್ಲಿಮರ ಧರ್ಮ ಗ್ರಂಥ. ಭಗವದ್ಗೀತೆ ಹಿಂದೂ ಧರ್ಮಗ್ರಂಥ ಹೀಗೆ ವಿಭಿನ್ನ ಜಾತಿ ಧರ್ಮಗಳು. ನಾನಾ ರೀತಿಯ ಆಚರಣೆಗಳು ಇದ್ದಾಗ್ಯೂ "ನಾವೆಲ್ಲರೂ ಸೌಹಾರ್ದತೆಯಿಂದ ಬಾಳುವುದು ಈ ಮಣ್ಣಿನ ಗುಣ. ಆದರೆ ಮತೀಯವಾದಿಗಳು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಜಾತಿ, ಧರ್ಮಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಈಗ ಎಸ್‌ಐಆರ್ (ಖಋ) ಹೆಸರಿನಲ್ಲಿ ತಮಗೆ ಬೇಡವಾದ ಮತದಾರರನ್ನು ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ.ಈ ಕುರಿತು ಎಲ್ಲರೂ ಎಚ್ಚೆತ್ತುಕೊಳ್ಳಬೇಕು" ಎಂದರು.   ಇನ್ನೋರ್ವ ಮುಖ್ಯ ಅತಿಥಿ, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ.ಗಫಾರ್ ಮಾತನಾಡಿ, "ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆಯುವುದಷ್ಟೇ ಅಲ್ಲದೆ, ಚಿಂತನಶೀಲರಾಗಿ ರೂಪುಗೊಳ್ಳಬೇಕು.ಕ್ರೈಸ್ತ ಸಮುದಾಯವು ಸ್ವಾತಂತ್ರ್ಯ ಪೂರ್ವದಿಂದಲೂ ಯಾವುದೇ ಜಾತಿ.ಧರ್ಮ. ಲಿಂಗ ಭೇದಭಾವವಿಲ್ಲದೆ ಶಿಕ್ಷಣ,ಆರೋಗ್ಯ ಸೇವೆ ಹಾಗೂ ’ಮಂಗಳೂರು ಸಮಾಚಾರ’ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದೆ" ಎಂದು ಶ್ಲಾಘಿಸಿದರು.  ಉಡುಪಿಯ ಚರ್ಚ್‌ ಆಫ್ ಗಾಡ್ ಸಂಸ್ಥೆಯ ಪಾಸ್ಟರ್ ಎಂ.ಎಸ್‌. ಜಾಯ್ ಮಾತನಾಡಿ, "ಪ್ರತಿಭಾ ಪುರಸ್ಕಾರವನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ಎಲ್ಲ ಸಮುದಾಯಗಳ ಮಕ್ಕಳಿಗೂ ವಿಸ್ತರಿಸುವುದು ಒಳ್ಳೆಯದು. ಪೋಷಕರು ದೈವಿಕ ಮೌಲ್ಯಗಳೊಂದಿಗೆ ಮಕ್ಕಳನ್ನು ಬೆಳೆಸಿದರೆ, ಅವರು ಮುಂಬರುವ ದಿನಗಳಲ್ಲಿ ಡಿಸಿ,ಎಸ್ಪಿ, ಕಮಿಷನರ್ ಹಾಗೂ ವಿಜ್ಞಾನಿಗಳಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ" ಎಂದು ಸಲಹೆ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ, "ಸಮುದಾಯದ ಯುವಕರು, ಮಹಿಳೆಯರು ಹಾಗೂ ಮಕ್ಕಳು ಎಲ್ಲಾ ರಂಗಗಳಲ್ಲೂ ಮುಂಚೂಣಿಗೆ ಬರಲು ಶಿಕ್ಷಣವೇ ಮೂಲಾಧಾರ. ಪ್ರತಿಭಾ ಪುರಸ್ಕಾರವು ಮಕ್ಕಳಲ್ಲಿ ಭವಿಷ್ಯದ ಸಾಧನೆಯ ಛಲವನ್ನು ತುಂಬುತ್ತದೆ. ನಮ್ಮ ಸಮುದಾಯದ ಕಾರ್ಯಚಟುವಟಿಕೆಗಳಿಗೆ ಸ್ವಂತ ಜಾಗ ಹಾಗೂ ಸಮುದಾಯ ಭವನದ ಅಗತ್ಯವಿದ್ದು, ಇದನ್ನು ಒದಗಿಸಲು ಸಂಬಂಧಪಟ್ಟವರು ಸಹಕರಿಸಬೇಕು" ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಯುಸಿಎಫ್ ಜಿಲ್ಲಾ ಅಧ್ಯಕ್ಷ ಫಾದರ್ ಅನಿಲ್ ಕುಮಾರ್, ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ರೆ: ವೈ. ಆನಂದ, ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ರೆ:ತಿಪ್ಪೇಶ್ ನಾಯಕ, ಪ್ರಧಾನ ಕಾರ್ಯದರ್ಶಿ ರೆ:ಡಿ.ಆರ್‌. ಪೀಟರ್, ಖಜಾಂಚಿ ರೆ: ಡೇವಿಡ್, ಸಹ ಖಜಾಂಚಿ ರೆ: ಪ್ರಸಾದ್, ಮಹಿಳಾ ಅಧ್ಯಕ್ಷೆ ರೆ:ರತ್ನಮ್ಮ ಶ್ರೀಶೈಲ, ಅಹಿಂದ ಜಿಲ್ಲಾ ಸಂಚಾಲಕ ಶ್ಯಾಮಸುಂದರ್ ಎ. ಹುಣಸಿಮರದ್ ವಕೀಲರು, ಜೆಡಿಎಸ್ ಸಾಂಸ್ಕೃತಿಕ ವಿಭಾಗದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಸೋರಟೂರು, ನಗರ ಅಧ್ಯಕ್ಷ ಸೋಮನ ಗೌಡ, ಹಿರಿಯರಾದ ಎಂ. ಶಾಂತರಾಜ್, ಸಮುವೇಲಪ್ಪ ಭಾವಿಮನಿ ಸೇರಿದಂತೆ ಸಮುದಾಯದ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಸದಾನಂದ ಭಾವಿಮನಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. 


ಸುದ್ದಿ ಓದಿ