ಅಥಣಿ

ರಸ್ತೆ ಅಪಘಾತದಲ್ಲಿ ಯೋಧನ ದುರ್ಮರಣ: ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ರಸ್ತೆ ಅಪಘಾತದಲ್ಲಿ ಯೋಧನ ದುರ್ಮರಣ: ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಅಥಣಿ 27: ಜಮ್ಮು ಭಾಗದ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಜೆ ಮೇಲೆ ತನ್ನ ಸ್ವ ಗ್ರಾಮಕ್ಕೆ ಆಗಮಿಸಿದ್ದ ಯೋಧನೋರ್ವ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು, ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಸ್ವ ಗ್ರಾಮ ತಾಲೂಕಿನ ಬಳ್ಳಗೇರಿ ಗ್ರಾಮದಲ್ಲಿ ನಡೆಸಲಾಯಿತು. 

ಶಂಕರ ಮಹಾಲಿಂಗಗೌಡ ಪಾಟೀಲ (32) ಮೃತ ಯೋಧನಾಗಿದ್ದು, ತನ್ನ ಪತ್ನಿಯ ಊರಿಗೆ ರಜೆಯ ಮೇಲೆ ಕೇವಲ 3 ದಿನಗಳ ಹಿಂದೆಯೇ ಆಗಮಿಸಿದ್ದ ನವ್ಹೆಂಬರ 26ರಂದು ತನ್ನ ದ್ವಿ ಚಕ್ರ ವಾಹನದ ಮೂಲಕ ಬೆಳಗಾವಿಗೆ ತೆರಳಿ ರಾತ್ರಿ ವಾಪಸ್ಸಾಗುತ್ತಿರುವ ಸಂಬಂಧದಲ್ಲಿ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಜೋರಾಗಿ ಏಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಯೋಧನ ಮೃತದೇಹದ ಶವ ಪರೀಕ್ಷೆಯ ನಂತರ ಸ್ವ ಗ್ರಾಮ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮಕ್ಕೆ ತರಲಾಯಿತು. 

ಯೋಧನ ಮೃತ ದೇಹವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ನಿಂಗಪ್ಪ ಖೋಕಲೆ,  ಚಂದ್ರಕಾಂತ ಇಮ್ಮಡಿ, ಗ್ರಾಮದ ಹಿರಿಯರಾದ ಬಾಬಾಸಾಹೇಬ ಪಾಟೀಲ ಬರಮಾಡಿಕೊಂಡರು. ಯೋಧನ ಮೃತ ದೇಹವನ್ನು ಸರಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಮೃತನ ತಂದೆ ಮಹಾಲಿಂಗಗೌಡ, ತಾಯಿ ಯಲ್ಲವ್ವ, ಪತ್ನಿ ಸೀಮಾ ಹಾಗೂ ಮಕ್ಕಳು ಸಹಿತ ಸಂಬಂಧಿಕರು, ಗ್ರಾಮದ ಹಿರಿಯರಾದ ಡಾ.ಸಿ.ಎ.ಸಂಕ್ರಟ್ಟಿ, ಕುಮಾರ ಚನ್ನರೆಡ್ಡಿ, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಕಂದಾಯ ನಿರೀಕ್ಷರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬಳ್ಳಿಗೇರಿ ಗ್ರಾಮಸ್ಥರು ಮೃತನ ಅಂತಿಮ ದರ್ಶನ ಪಡೆದುಕೊಂಡರು. 

ನಂತರ ಬೆಳಗಾವಿಯ ಮರಾಠಾ ರೆಜಿಮೆಂಟನ ಯೋಧರು ಬಳ್ಳಿಗೇರಿ ಗ್ರಾಮಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡು ಮಿಲಿಟರಿ ಗೌರವ ಸೂಚಿಸಿದರು. ನಂತರ ಯೋಧನ ತೋಟದಲ್ಲಿ ಕುಟುಂಬಸ್ಥರು, ಸಂಬಂಧಿಕರ ಮಧ್ಯೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಮೃತ ಯೋಧ 2008ರಿಂದ ಮದ್ರಾಸ್ ರೆಜಿಮೆಂಟನಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಸುದ್ದಿ ಓದಿ