ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಕಾರು-ಟ್ರಕ್ ಡಿಕ್ಕಿ: ಆರು ಮಂದಿ ಸಾವು, ಬಾಲಕಿಗೆ ಗಾಯ
ಜೈಪುರ, ಅ. 24 : ರಾಜಸ್ಥಾನದ ಚುರು ಜಿಲ್ಲೆಯ ಸದುಲ್ಪುರ್ ಪಟ್ಟಣದ ಸಮೀಪ ವೇಗವಾಗಿ ಬಂದ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಒಂದೇ ಕುಟುಂಬದ ಐವರು ಸೇರಿದ್ದಾರೆ. ಓರ್ವ ಪುರುಷ, ಮೂವರು ಮಹಿಳೆಯರು ಹಾಗೂ ಒಂದು ಮಗು ಮೃತಪಟ್ಟಿದ್ದು, ಕಾರಿನ ಚಾಲಕನೂ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರಿಗೆ ಹರಸಾಹಸ ಪಡಬೇಕಾಯಿತು. ಬಳಿಕ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಚುರು ಜಿಲ್ಲೆಯ ತಾರಾನಗರ ಉಪವಿಭಾಗದ ಸೋಮ್ಸಿಸರ್ ಗ್ರಾಮದ ಕುಟುಂಬದ ಸದಸ್ಯರು ಸಮೀಪದ ಗ್ರಾಮದ ದೇವಾಲಯವೊಂದಕ್ಕೆ ಪೂಜೆ ಸಲ್ಲಿಸಲು ತೆರಳುತ್ತಿದ್ದಾಗ, ಇಂದು ಬೆಳಿಗ್ಗೆ ದದ್ರೇವಾ-ತಾರಾನಗರ ರಸ್ತೆಯಲ್ಲಿ ಅವರ ಕಾರು ಟ್ರಕ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಆರು ಮಂದಿ ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದವರಿಗೆ ಹೃತ್ಪೂರ್ವಕ ಸಾಂತ್ವನ ತಿಳಿಸಿದ್ದಾರೆ.