ಸೌಲಭ್ಯ ಕೊಡಿದಿದ್ದರೆ ಮತದಾನ ಬಹಿಷ್ಕಾರ : ಸೌಲಭ್ಯ ವಂಚಿತ ಮಳಗಲಿ ಗ್ರಾಮಸ್ಥರಿಂದ ಮನವಿ
ಯರಗಟ್ಟಿ 02: ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಹಿರೇಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳಗಲಿ ಗ್ರಾಮಸ್ಥರು ಮೂಲ ಸೌಲಭ್ಯಗಳಿಂದ ವಂಚಿತರಾಗಿ ಸದ್ಯ ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.
ಹಿರೇಬೂದನೂರ ಗ್ರಾಮ ಪಂಚಾಯತಿಗೆ ಸೋಮವಾರ ಮಳಗಲಿ ಗ್ರಾಮಸ್ಥರು ಭೇಟಿ ನೀಡಿ ಪಿಡಿಒ ಗುರುಪಾದ ಗಿರೆಣ್ಣವರಿಗೆ ಮನವಿ ಸಲದಲಿಸಿದರು.
ಚುನಾವಣಾ ಸಂದರ್ಭದಲ್ಲಿ ಮತಕೇಳಲು ಬರುವ ಅಭ್ಯರ್ಥಿಗಳು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವ ಗೋಜಿಗೆ ಹೋಗಿಲ್ಲ. ನಿತ್ಯ ಇಲ್ಲಿನ ಜನ ಪ್ರತಿಯೊಂದಕ್ಕೂ ಪರದಾಡುವ ದುಸ್ಥಿತಿ ಇದೆ. ಸೌಲಭ್ಯ ನೀಡಿದರೆ ಮಾತ್ರ ಚುನಾವಣೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಗ್ರಾಮಕ್ಕೆ ಸಮರ್ಕ ರಸ್ತೆಯಿಲ್ಲ. ನೀರಿಗಾಗಿ ಕಿಮೀಗಟ್ಟಲೆ ಅಲೆದಾಡಬೇಕಿದೆ. ವಿದ್ಯುತ್ ಇಲ್ಲ. ಆರೋಗ್ಯ ಕೇಂದ್ರ, ಸಾರಿಗೆ ವ್ಯವಸ್ಥೆಯಿಲ್ಲದೇ ಜೀವನ ಸಾಗಿದೆ. ಬಳ್ಳಾರಿ ನಾಲಾ ಕಾಲುವೆ, ಮಾಕಂರ್ಡೇಯ ಬಲದಂಡೆ ಕಾಲುವೆ, ಮುರಗೋಡ ಏತ ನೀರಾವರಿ, ಮಳಗಲಿ ಚಿಕ್ಕ ನೀರಾವರಿ ಕೆರೆ ಇದೆ. ಕೆರೆಯಲ್ಲಿ ಬಾವಿ ತೋಡಿದರೂ ಜಾನುವಾರುಗಳಿಗೆ ನೀರಿಲ್ಲ. ಇಲ್ಲಿನ ಜನತೆ ಕುಡಿಯುವ ನೀರಿಗೆ ಬೋರ್ ವೆಲ್ ಅವಲಂಬಿಸಿದ್ದೇವೆ. ಸೌಲಭ್ಯ ನೀಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಮಾತ್ರ ಎಸಿ ರೂಮಿನಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ಗಳಿಲ್ಲ. ಮೊಬೈಲ್ ನೆಟ್ವರ್ಕ ಗಾಗಿ ಯರಜರ್ವಿ ಹಾಗೂ ಹಿರೇಬೂದನೂರ ಗ್ರಾಮಗಳಿಗೆ ಬರಬೇಕಿದೆ. ನಮ್ಮ ಗೋಳನ್ನು ಕೇಳುವವರಿಲ್ಲದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಚುನಾವಣಾ ದಿನಗಳಲ್ಲಿ ಮಾತ್ರ ಅಧಿಕಾರಿಗಳು ಮತ್ತು ಅಭ್ಯರ್ಥಿಗಳಿಗೆ ಮಳಗಲಿ ಗ್ರಾಮ ನೆನಪಿಗೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರನ್ನು ಭೇಟಿ ಮಾಡಿದ ತಾಪಂ ಇಓ ಯಶವಂತಕುಮಾರ ಮನವೊಲಿಸಲು ಪ್ರಯತ್ನಿಸಿದರು.
ಸರಕಾರ ನಿಮ್ಮ ಬೇಡಿಕೆಗೆ ಸ್ಪಂದಿಸಲಿದೆ. ಬಹಿಷ್ಕಾರ ಬೇಡವೆಂದು ತಿಳಿಸಿದಾಗ, ಸೌಲಭ್ಯ ಸಿಗದಿದ್ದಲ್ಲಿ ಖಂಡಿತವಾಗಿಯೂ ಈ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಖಡಕ್ ಎಚ್ಚರಿಕೆ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಶಿವಬಸವ್ವ ನಾಯ್ಕಪ್ಪಗೋಳ, ರಾಘವೇಂದ್ರ ರುದ್ರಪ್ಪನವರ, ತಿಮ್ಮಣ್ಣ ಬಂಡಿವಡ್ಡರ, ಪಕ್ಕೀರ್ಪ ವಕ್ಕುಂದ, ಪಕ್ಕೀರಪ್ಪ ಮುಂಗಬೀರ, ಈರಪ್ಪ ಡೊಳ್ಳಿ, ಲಕ್ಕಪ್ಪ ನಾಯ್ಕಪ್ಪಗೋಳ, ಯಲ್ಲಪ್ಪ ನಾಯ್ಕರ, ಶಿವಾನಂದ ಮಾಕಾರ, ಯಲ್ಲಪ್ಪ ಕಂಬಳಿ ಇತರರಿದ್ದರು.
ಮಳಗಲಿಯಿಂದ ಯರಗಟ್ಟಿ 12 ಕಿಮಿ., ಬೈಲಹೊಂಗಲ 21 ಕಿ.ಮಿ ಅಂತರದಲ್ಲಿವೆ. ತಾಲೂಕು ಕೇಂದ್ರಕ್ಕೆ 55 ಕಿ.ಮಿ. ದೂರದ ಸವದತ್ತಿಗೆ ಕ್ರಮಿಸಬೇಕಾದ ದುಸ್ಥಿತಿ ಇದೆ. ಜೊತೆಗೆ ಸಮೀಪದ ತಡಸಲೂರ ಯೂನಿಯನ್ ಬ್ಯಾಂಕಿನಲ್ಲಿ ಸರಕಾರಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಕೇಳಿದರೆ ಚಚಡಿಯಲ್ಲಿರುವ ಬ್ಯಾಂಕ ಆಫ್ ಬರೋಡಾ ಸಂಪರ್ಕಿಸಲು ತಿಳಿಸುತ್ತಾರೆ.
ಶಿವರಾಜ ರುದ್ರಪ್ಪನವರ, ಹಿರೇಬೂದನೂರ ಗ್ರಾ.ಪಂ. ಉಪಾಧ್ಯಕ್ಷ
ಮಳಗಲಿ ಗ್ರಾಮಸ್ಥರ ಚುನಾವಣಾ ಬಹಿಷ್ಕಾರದ ಕುರಿತು ಮಾಹಿತಿ ಬಂದಿದ್ದು. ಈ ಗ್ರಾಮಗಳ ಸವದತ್ತಿ ತಾಲೂಕಿಗೆ ಬರುತ್ತವೆ ಹಾಗೂ ಮತದಾನವನ್ನು ಬೈಲಹೊಂಗಲ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ ಆದರಿಂದ ಬೈಲಹೊಂಗ ತಹಶೀಲ್ದಾರ ವ್ಯಾಪ್ತಿಗೆ ಒಳಪಡುವುದರಿಂದ ಅವರಿಗೆ ಮಾಹಿತಿ ನೀಡಲಾಗಿದೆ ಅವರೇ ನೋಡಿಕೊಳ್ಳುತೆವೆ ಎಂದು ತಿಳಿಸಿದ್ದಾರೆ.
ಎಸ್. ಎಸ್. ಇಂಗಳೆ, ತಹಶೀಲ್ದಾರ, ಯರಗಟ್ಟಿ
ಬಹಿಷ್ಕಾರ ಕುರಿತಾದ ಮಾಹಿತಿಯಿಲ್ಲ. ವಿಷಯ ತಿಳಿದು ಪ್ರತಿಕ್ರಿಯಿಸುವೆ.
ಸತೀಶಕುಮಾರ, ಎಆರ್ಒ ಬೈಲಹೊಂಗಲ.