ಕನ್ನಡ ಸಾಹಿತ್ಯ ಪರಿಷತ್ತನ್ನು ಮಾದರಿಯಾಗಿ ಕಟ್ಟಬೇಕಾಗಿದೆ : ಹಿರೇಮಠ
ಶಿಗ್ಗಾವಿ 26: ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಮಾದರಿಯಾಗಿ ರಾಜ್ಯ ಅನುಕರಿಸುವಂತಹ ರೀತಿಯಲ್ಲಿ ಕಟ್ಟಬೇಕಾಗಿದೆ ಕಳೆದ ಅವಧಿಯಲ್ಲಿ ಅಂಥ ಹಲವಾರು ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ. ಅವುಗಳ ಮುಂದುವರಿಕೆಗಾಗಿ ಮತ್ತೊಮ್ಮೆ ಅವಕಾಶ ಕೇಳುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಕನ್ನಡ ತಾಯಿಯ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಲಿಂಗಯ್ಯ ಹಿರೇಮಠ ಕಸಾಪ ಮತದಾರರಲ್ಲಿ ವಿನಂತಿಸಿದರು.
ಪಟ್ಟಣದ ಶಾಲಾ-ಕಾಲೇಜುಗಳಲ್ಲಿ ಕಸಾಪ ಮತದಾರರನ್ನು ಭೇಟಿ ಮಾಡಿ ಮತ ಯಾಚಿಸಿ ಮಾತನಾಡಿ ಹಾವೇರಿಗೆ ಇನ್ನು 10-15 ವರ್ಷ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅವಕಾಶವೇ ಸಿಗುವುದಿಲ್ಲ ಎನ್ನುವ ವಾತಾವರಣದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು, ಸಚಿವರು, ಶಾಸಕರು ಹಾಗೂ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ 86 ನೆಯ ಸಮ್ಮೇಳನದ ಆತಿಥ್ಯವನ್ನು ಹಾವೇರಿಗೆ ಪಡೆಯಲಾಯಿತು. ಸಮ್ಮೇಳನದ ಆತಿಥ್ಯ ದೊರೆತ ಕಾರಣಕ್ಕಾಗಿ ನಾನು ಮತ್ತೊಮ್ಮೆ ಸ್ಪರ್ಧಿಸುತ್ತಿಲ್ಲ ಎಂದ ಅವರು ಸಮ್ಮೇಳನ ಜರುಗಿಸುವ ಎಲ್ಲ ತಯಾರಿಯನ್ನು ಮಾಡಿ ಆಚರಣೆಯ ಹೊಸ್ತಿಲಲ್ಲಿ ತಂದು ನಿಲ್ಲಿಸಲಾಗಿದೆ. ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಹಾಗಾಗಿ ಜಿಲ್ಲೆಯ ಹಿರಿಯ ಸಾಹಿತಿಗಳ ಒತ್ತಾಸೆಯಿಂದ ಕಸಾಪ ಆಜೀವ ಸದಸ್ಯರ ಒತ್ತಾಯಕ್ಕೆ ಮಣಿದು ಮತ್ತೊಮ್ಮೆ ತಮ್ಮ ಮುಂದೆ ಬಂದಿದ್ದೇನೆ ಎಂದು ತಮ್ಮ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು
ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ಕಸಾಪ ಕ್ಕೆ ನಿವೇಶನ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ ಅವರು ಈಗಾಗಲೇ ಹಾವೇರಿಯಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕಾಗಿ ಜಾಗೆ ಗುರುತಿಸಿ ನಗರ ಸಭೆಗೆ ಹಣ ಕಟ್ಟಲಾಗಿದೆ. ಜೋಯಿಸರಹಳ್ಳಿಯಲ್ಲಿ ಸಾಹಿತ್ಯ ಭವನ ನಿರ್ಮಿಸಲಾಗಿದೆ. ಮುಂದಿನ ಅವಧಿಯಲ್ಲಿ ಎಲ್ಲ ತಾಲೂಕುಗಳಲ್ಲಿ ಸಾಹಿತ್ಯ ಭವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಬಿಬಿಎಂಡಿ ಕಾಲೇಜಿನ ಪ್ರಾಚಾರ್ಯ ರಮಾಕಾಂತ ಭಟ್, ಉಪಪ್ರಾಚಾರ್ಯ ಜಿ.ಎನ್ ಯಲಿಗಾರ, ನಾಗರಾಜ ದ್ಯಾಮನಕೊಪ್ಪ, ಎಸ್.ಎನ್ ಮುಗಳಿ, ಎಸ್.ಕೆ ಹೂಗಾರ, ಬಿ.ವೈ ಉಪ್ಪಾರ, ಎಂ.ಜೆ ತಂಗೋಡ, ಎಸ್.ಎಚ್ ಅಕ್ಕಿ, ಪ್ರಕಾಶ ಬಾರಕೇರ, ಎಂ.ಆರ್ ಚೂರಿ, ಪಿ.ಸಿ ಹಿರೇಮಠ, ಡಾ. ನಾಗಲಾಪುರ ಎಫ್.ಎಸ್ ಶಿವಣ್ಣವರ, ಶ್ರೀಮತಿ ಜಿ.ಎಂ ಅರಗೋಳ, ಸಿ.ಟಿ ಪಾಟೀಲ, ದಳವಾಯಿ, ದೇವರಮನಿ, ಎಂ.ಎ ತಾಳಿಕೋಟಿ, ಮಂಜು ಬಿಸೆಟ್ಟಿ, ಡಾ ಬಿ.ಎಲ್ ಛಲವಾದಿ ಮುಂತಾದವರು ಇದ್ದರು.