ಬ್ಯಾಡ್ಗಿ

ಸ್ವಯಂಪ್ರೇರಿತ ಕೋವಿಡ್ ಲಸಿ ಕಾರ್ಯಕ್ರಮಕ್ಕೆ ವಿರೂಪಾಕ್ಷಪ್ಪ ಚಾಲನೆ

ಸ್ವಯಂಪ್ರೇರಿತ ಕೋವಿಡ್ ಲಸಿ ಕಾರ್ಯಕ್ರಮಕ್ಕೆ ವಿರೂಪಾಕ್ಷಪ್ಪ ಚಾಲನೆ

ಬ್ಯಾಡಗಿ 21: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಎರಡನೆಯ ಅಲೆಯು ಹೆಚ್ಚಾಗಿದ್ದು, ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಲಸಿಕಾ ಕೇಂದ್ರವನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಸೇವೆಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ಕೋವಿಡ್ ಲಸಿಕೆ ಪಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಸಾರ್ವಜನಿಕರು ಯಾವುದೇ ರೀತಿಯ ಹಿಂಜರಿಕೆಯಿಲ್ಲದೇ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಅಲ್ಲದೇ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕೋವಿಡ್ ವಿರುದ್ಧ ಹೋರಾಡಬೇಕೆಂದು ಮನವಿ ಮಾಡಿದರು. 

ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಹೀಲ್ ಹರವಿ ಮಾತನಾಡಿ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟ ಹಾಗೂ 45-59 ವರ್ಷದ ಆರೋಗ್ಯ ತೊಂದರೆ ಇರುವ ಫಲಾನುಭವಿಗಳು ತಮ್ಮ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದು. 45-59 ವರ್ಷದವರು ತಮಗೆ ಇರುವ ಕಾಯಿಲೆ ಬಗ್ಗೆ ವೈದ್ಯರಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕಲ್ಲದೆ ಆಧಾರ್ ಕಾರ್ಡ್ ಅಥವಾ ಇತರೆ ಯಾವುದೇ ಗುರುತಿನ ಚೀಟಿ ಮತ್ತು ಮೊಬೈಲ್ ತರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತೀ ಡೋಸ್’ಗೆ 250 ರೂ, ಪಾವತಿಸಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಪುಟ್ಟರಾಜ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಮಾತನವರ, ಸುರೇಶ ಯತ್ನಳ್ಳಿ, ವಿರೇಂದ್ರ ಶೆಟ್ಟರ, ಸುರೇಶ ಆಸಾದಿ, ಶಿವಯೋಗಿ ಶಿರೂರ, ಕಾರ್ಯಕ್ರಮ ವ್ಯವಸ್ಥಾಪಕ ಸದಾನಂದ ಚಿಕ್ಕಮಠ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ