ಮಾತೃ ಸಂಸ್ಕಾರದಿಂದ ವೀರ ಸನ್ಯಾಸಿಯಾದ ವಿವೇಕಾನಂದರು
ತುಮ್ಮಿನಕಟ್ಟಿಯಲ್ಲಿ ಅಭೂತಪೂರ್ವ; 20 ಗ್ರಾಮಗಳಲ್ಲಿ ನಡೆದ ಭಾರತ ಮಾತಾ ರಥಯಾತ್ರೆ
ಲೋಕದರ್ಶನ ವರದಿ
ರಾಣೇಬೆನ್ನೂರು20: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಪ್ರಯುಕ್ತ ಶಿಡ್ಲು ಪತ್ರಿಕಾ ಬಳಗ ಹಾಗೂ ಭಾರತ ಮಾತಾ ಅಮೃತ ಮಹೋತ್ಸವ ಸಮಿತಿಯವರು ತಾಲೂಕಿನ 108 ಗ್ರಾಮಗಳು ಮತ್ತು ಜಿಲ್ಲೆಯ 8 ತಾಲೂಕಾ ಕೇಂದ್ರಗಳಲ್ಲಿ ಜು.16 ರಿಂದ ಅ.15ರವರೆಗೆ 30 ದಿವಸಗಳ ಕಾಲ ಭಾರತ ಮಾತಾ ರಥ ಯಾತ್ರೆ ಏರ್ಪಡಿಸಲಾಗಿದೆ.
ಈ ಮೆರವಣಿಗೆಯು ಇಂದು 4ನೇ ಪಾದಾರ್ಪಣೆ ಮಾಡಿದ್ದು ನಿನ್ನೆ ಕೂಲಿ, ಮೆಣಸಿನಹಾಳ, ಸಣ್ಣಸಂಗಾಪುರ, ದೊಡ್ಡಬಸಾಪುರ, ಮಾಳನಾಯಕನಹಳ್ಳಿ ಹಾಗೂ ಇಂದು ತಿಮ್ಮೇನಹಳ್ಳಿಯಲ್ಲಿ ಮೆರವಣಿಗೆ ನಡೆಸಿ ತುಮ್ಮಿನಕಟ್ಟಿ ಗ್ರಾಮಕ್ಕೆ ಆಗಮಿಸಿದಾಗ ಸವಿರಾರು ವಿದ್ಯಾರ್ಥಿಗಳು ಸೇರಿ ಭಾರತ ಮಾತೆಗೆ ಭಕ್ತಿಪೂರ್ವಕ ಸ್ವಾಗತ ನೀಡಿದರು.
ಇಲ್ಲಿಯ ಸಂಗನಬಸವೇಶ್ವರ ವಿದ್ಯಾಲಯದ ಮುಂಭಾಗದಲ್ಲಿ ಮುರುಘೇಶ್ ಮಹಾನುಭಾವಿಮಠ, ಗಿರೀಶ್ ಅಮ್ಮನವರ ಭಾರತ ಮಾತೆಗೆ ಪೂಜೆ ನೆರವೇರಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಯಾತ್ರೆಗೆ ಡಾ.ಬಿ.ಎಸ್.ಕೇಲಗಾರ, ಪ್ರಾಂಶುಪಾಲರಾದ ಸಂಗನಗೌಡ್ರ ಹಾಗೂ ಮುಖಂಡರಾದ ಸತೀಶ್ ಉಪ್ಪಿನ ಬಸವರಾಜ ಶೇಷಗಿರಿ ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕ ಮತ್ತು ಬಾಲಕಿಯರ ಶಾಲಾ ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಂಗನಬಸವೇಶ್ವರ ಪ್ರೌಢಶಾಲೆ ಹಾಗೂ ಕಿರಿಯ ಮಹಾವಿದ್ಯಾಲಯದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ದಾರಿಯುದ್ದಕ್ಕೂ ಭಾರತ ಮಾತಾ ಕೀ ಜೈ, ಅಮೃತ ಮಹೋತ್ಸವಕ್ಕೆ ಜೈ, ಮೆಣಸಿನಹಾಳ ತಿಮ್ಮನಗೌಡ್ರಗೆ ಗೆ ಹಾಕಿದ ಜಯಘೋಷ ಮುಗಿಲು ಮುಟ್ಟುವಂತಿತ್ತು. ಮೆರವಣಿಗೆಯ ನಂತರ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರಭಕ್ತಿ ಪುನರ್ ಜಾಗೃತಿ ಸಭೆಯು ನಡೆಯಿತು. ಪ್ರಾಸ್ತಾವಿಕವಾಗಿ ಅಮೃತ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಎಸ್.ಜಿ.ಮಹಾನುಭಾವಿಮಠ ರವರು ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ಬಂದಿಲ್ಲ. ವೀರ ರಾಣಿ ಕಿತ್ತೂರು ಚನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀ ಬಾಯಿ, ಒನಕೆ ಓಬವ್ವ, ಸುಭಾಷಚಂದ್ರ ಬೋಸ್, ಸಾವರ್ಕರ್, ಚಂದ್ರಶೇಖರ ಆಜಾದ, ಭಗತ್ ಸಿಂಗ್, ಮಹದೇವ ಮೈಲಾರ, ಮೆಣಸಿನಹಾಳ ತಿಮ್ಮನಗೌಡ್ರ ರಂತಹ ಲಕ್ಷಾಂತರ ಯುವಕರ ಪ್ರಾಣ ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಿ ಭಾರತ ಮಾತೆಯನ್ನು ಜಗಜ್ಜನನಿಯಾಗಿಸಬೇಕೆಂದು ಹೇಳಿ ಸ್ವಾಮಿ ವಿವೇಕಾನಂದರು ಜಗತ್ತಿನಲ್ಲಿಯೇ ಶ್ರೇಷ್ಠ ಸನ್ಯಾಸಿಯಾಗಲು ಅವರ ತಾಯಿ ಭವನೇಶ್ವರಿದೇವಿ ನೀಡಿದ ಸಂಸ್ಕಾರವೇ ಕಾರಣವಾಗಿದ್ದು ವಿವೇಕಾನಂದರು ಬಾಲಕರಿದ್ದಾಗ ಮೊಳೆ ತೆಗೆದುಕೊಂಡು ನೆಲದ ಮೇಲೆ ಹೊಡೆಯುತ್ತಿದ್ದಾಗ ಅವರ ತಾಯಿ ನೋಡಿ ಮಗು ನರೇಂದ್ರ, ಹಾಗೆ ಹೊಡೆಯಬಾರದು. ಭೂಮಿ ತಾಯಿ ನಿನ್ನನ್ನು ಹೊತ್ತು ಅನ್ನ, ನೀರು, ಗಾಳಿ, ಜಲ, ವಾಯು, ಬೆಳಕು ನೀಡಿದ್ದಲ್ಲದೆ ಸತ್ತಾಗಲೂ ಕೂಡ ತನ್ನ ಮಡಿಲಲ್ಲಿ ಹಾಕಿಕೊಳ್ಳುವ ಭೂಮಿ ತಾಯಿ ಇದ್ದಂತೆ. ನೀನು ಮೊಳೆ ಇಟ್ಟು ಹೊಡೆದರೆ ತಾಯಿಗೆ ನೋವಾಗುತ್ತೆ. ಹೆತ್ತ ತಾಯಿ ಎಷ್ಟು ಮುಖ್ಯವೋ, ಮಾತೃ ಭೂಮಿಯೂ ಸಹ ಅಷ್ಟೇ ಮುಖ್ಯ ಎಂದು ಹೇಳಿದ ತಕ್ಷಣ ವಿವೇಕಾನಂದರು ಮಾತೃ ಭೂಮಿಯ ಪರಿಕಲ್ಪನೆ ತುಂಬಿಕೊಂಡು ಅಗಾಧ ದೇಶಪ್ರೇಮ ಬೆಳೆಸಿಕೊಂಡಿದ್ದರಿಂದಲೇ ಅವರು ವೀರ ಸನ್ಯಾಸಿಯಾಗಿ ಭಾರತದ ಕೀರ್ತಿ ಪತಾಕೆಯನ್ನು ಚಿಕಾಗೋ ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೂಲಕ ಜಗತ್ತಿಗೆ ಹಾರಿಸಲು ಸಾಧ್ಯವಾಯಿತೆಂದು ಹೇಳಿ, ಅಂತಹ ಮಾತೃಭೂಮಿ ಬಗ್ಗೆ ದೇಶಭಕ್ತಿ ಹೊಂದಿದರೆ ಭಾರತ ಮಾತೆಗೆ ಸಂದ ಗೌರವವಾಗುತ್ತದೆ ಎಂದರು.
ಸಭೆಯಲ್ಲಿ ಶಿಕ್ಷಕ ಅಜರ್ುನ್ ಮಾತನಾಡಿ, ದೇಶಕ್ಕೆ ಗೌರವ ಸಲ್ಲಿಸಬೇಕಾದರೆ ಮಾತೃ ಪ್ರೇಮ ಬೆಳೆಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಹಾಗೂ ದೇಶದ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಸದಾಶಿವ ಉಪ್ಪಿನ ರವರು ಮಾತನಾಡಿ, ಇಂದಿನ ಮಕ್ಕಳು ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿಯನ್ನು ಕಡೆಗಣಿಸುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಅನ್ಯ ದೇಶದವರು ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನಮ್ಮಂತೆ ಬಾಳಲು ಯತ್ನಿಸುತ್ತಿದ್ದಾರೆ. ಆದ್ದರಿಂದ ನಾವು ನಮ್ಮತನ ಬಿಡದೇ ದೇಶಭಕ್ತಿ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿರಿ ಎಂದರು.
ವೇದಿಕೆಯಲ್ಲಿ ಸ.ಹಿ.ಪ್ರಾ. ಬಾಲಕಿಯರ ಶಾಲಾ ಗುರುಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು