ಕಾಗವಾಡ

ಗ್ರಾಮಸ್ಥರಿಂದ ಜುಗೂಳ ಪಂಚಾಯತಿ ಎದುರು ಪ್ರತಿಭಟನೆ

ಗ್ರಾಮಸ್ಥರಿಂದ ಜುಗೂಳ ಪಂಚಾಯತಿ ಎದುರು ಪ್ರತಿಭಟನೆ

ಕಾಗವಾಡ, 16 : ಕಳೆದ ಅನೇಕ ದಿನಗಳಿಂದ ವಿವಾದಕ್ಕೆ ಕಾರಣವಾಗಿರುವ ಶಹಾಪೂರ ಸ್ಮಶಾನ ಭೂಮಿ ವಿವಾದ ತಾರಕ್ಕೇರಿದ್ದು, ಶಹಾಪೂರ ಗ್ರಾಮದ ಸ್ಮಶಾನ ಭೂಮಿ ಶಹಾಪೂರ ಗ್ರಾಮಸ್ಥರಿಗೆ ಸಲ್ಲಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. 

ಸೋಮವಾರ ದಿ. 16 ರಂದು ತಾಲೂಕಿನ ಜುಗೂಳ ಗ್ರಾಮದ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮಸ್ಥರು ನಮ್ಮ ಸ್ಮಶಾನ ಭೂಮಿ ನಮ್ಮ ಗ್ರಾಮಕ್ಕೆ ಸೇರಬೇಕೆಂದು ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು. 

ಈ ವೇಳೆ ಗ್ರಾ.ಪಂ. ಸದಸ್ಯ ವಿಜಯ ನಾಯಿಕ ಮಾತನಾಡಿ, 200 ವರ್ಷಗಳ ಹಿಂದೆ ಸಂಕೇಶ್ವರದ ಜಗದ್ದುರುಗಳು ನಮಗೆ ಈ ಜಮೀನನ್ನು ದಾನ ನೀಡಿದ್ದು, ಅದು ಲಿಂಗಾಯತ ಸ್ಮಶಾನ ಭೂಮಿಯಾಗಿದ್ದು, ಅದು ಕೇವಲ ಶಹಾಪೂರ ಗ್ರಾಮಸ್ಥರಿಗೆ ಸೇರಿದೆ. ಅದರಲ್ಲಿ ಜುಗೂಳ ಗ್ರಾಮಸ್ಥರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಇಷ್ಟಾಗಿಯೂ ಜುಗೂಳ ಗ್ರಾಮದ ಜನರಿಗೆ ಇಲ್ಲಿಯ ವರೆಗೆ ಸಹಕಾರ ನೀಡಿ, ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದೇವು. ಈಗ ರಾಜಕೀಯ ಒತ್ತಡಕ್ಕೆ ಮಣಿದು ನಮಗೆ ಸೇರಿದ ಸ್ಮಶಾನ ಭೂಮಿಯನ್ನು ಜುಗೂಳ ಗ್ರಾಮಸ್ಥರಿಗೆ ನೀಡುವ ಹುನ್ನಾರ ಮಾಡಿ, ನಾವು ಹಾಕಿರುವ ತಂತಿ ಬೇಲಿಯನ್ನು ಪೋಲಿಸರ ರಕ್ಷಣೆಯಲ್ಲಿ ತೆರವುಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಲು ಹೋದರೇ ನಮಗೆ ಬೆದರಿಕೆ ನೀಡುತ್ತಿದ್ದಾರೆ. ಆದ್ದರಿಂದ ನಮ್ಮ ಗ್ರಾಮಕ್ಕೆ ಸೇರಿದ ಸ್ಮಶಾನ ಭೂಮಿ ನಮಗೆ ಸೇರಬೇಕು. ಅದು ಸರ್ಕಾರಿ ಜಾಗೆ ಅಲ್ಲ ಇದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕೆಂದು ಆಗ್ರಹಿಸಿದರು. ಮತ್ತು ನಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. 

ಸ್ಥಳಕ್ಕೆ ಉಪತಹಶೀಲ್ದಾರ ರಶ್ಮಿ ಜಕಾತೆ, ತಾ.ಪಂ. ಇಓ ವೀರಣ್ಣಾ ವಾಲಿ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಪಿಡಿಓ ಶೈಲಶ್ರೀ ಬಜಂತ್ರಿ ಆಗಮಿಸಿ, ಪ್ರತಿಭಟನಾಕಾರ ಮನವೊಲಿಸಿ, ತಮ್ಮ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.  

ಈ ಸಮಯದಲ್ಲಿ ಮುಖಂಡರಾದ ದೀಪಕ ಪಾಟೀಲ, ಮಾದಗೌಡಾ ಪಾಟೀಲ, ಸಂತೋಶ ಪಾಟೀಲ, ಬಬನ ಕಮತೆ, ಪ್ರಮೋದ ಪಾಟೀಲ, ಬಾಬು ಕಾಂಬಳೆ, ತುಕಾರಾಮ ಕಾಂಬಳೆ, ಕಲ್ಲಪ್ಪಾ ದೊಡಮನಿ, ತಾತ್ಯಾಸಾಬ ಜಾಧವ, ರಾಮಚಂದ್ರ ಸನದಿ, ಶ್ರೀಪಾಲ ಸನದಿ, ಸುಶೀಲಾ ಕಾಂಬಳೆ, ಗುಣವಂತಿ ಕಾಂಬಳೆ, ವಿಜಯಾ ಕಾಂಬಳೆ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಐ ಗಂಗಾ ಬಿರಾದರ ಸೂಕ್ತ ಬಂದೋಬಸ್ತ ಕೈಗೊಂಡಿದ್ದರು. 


ಸುದ್ದಿ ಓದಿ