ತಾಳಿಕೋಟಿ

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಗ್ರಾಮ ವಾಸ್ತವ್ಯ

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಗ್ರಾಮ ವಾಸ್ತವ್ಯ


ತಾಳಿಕೋಟೆ21: ಸರ್ಕಾರಿ ಯೋಜನೆಗಳ ಸವಲತ್ತು ಪಡೆಯಲು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದ್ದು ಗ್ರಾಮ ವಾಸ್ಯವ್ಯದ ಲಾಭವನ್ನು ಸದುಪೋಗಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಶ್ರೀಧರ ಗೋಟೂರ ಹೇಳಿದರು. 

ತಾಲೂಕಿನ ಕೊಡಗನೂರ ಗ್ರಾಮದಲ್ಲಿ ತಾಳಿಕೋಟೆ ತಾಲೂಕಾಡಳಿತದಿಂದ ನಡೆದ ಗ್ರಾಮ ವಾಸ್ಯವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕೇವಲ ಹಳ್ಳಿಗೆ ಬಂದು ಭಾಷಣ ಮಾಡಿ ಹೋಗುವುದು ಗ್ರಾಮವಾಸ್ತವ್ಯದ ಉದ್ದೇಶವಲ್ಲ. ಗ್ರಾಮ ವಾಸ್ತವ್ಯ ಮಾಡುವ ಗ್ರಾಮದಲ್ಲಿ ಪ್ರತಿ ಮನೆ ಮನೆಗೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ಪಿಂಚಣಿ, ಮಾಸಾಶನ, ವಿಕಲಚೇತನರ ಮಾಸಾಶನಕ್ಕೆ ಯಾರು ಅರ್ಹರಿದ್ದಾರೆ, ಅವರಿಗೆ ಸವಲತ್ತು ದೊರೆತಿದೆಯೇ ಇಲ್ಲವೆ, ಯೋಜನೆಗಾಗಿ ಯಾರು ಅರ್ಹ ಫಲಾನುಭವಿಗಳಿದ್ದಾರೆ ಎಂಬುದನ್ನು ಗುರುತಿಸಲು ಸರ್ವೆ ಮಾಡಿಸಲಾಗುತ್ತಿದೆ. ಅರ್ಹರಿದ್ದೂ, ಸವಲತ್ತಿನಿಂದ ವಂಚಿತರಾಗಿದ್ದಲ್ಲಿ, ಅಂತಹವರಿಗೆ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸೌಲಭ್ಯ ಮಂಜೂರು ಮಾಡಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಅರ್ಹರಿಗೆ ಯೋಜನೆಯನ್ನು ತಲುಪಿಸುವ ಮೂಲಕ, ಜನರ ಮನೆ ಬಾಗಿಲಲ್ಲೇ ಸರ್ಕಾರವಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಯತ್ನ ಮಾಡುತ್ತಿದ್ದೇವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿದಾಗ ಮಾತ್ರ ಇಂತಹ ಕಾರ್ಯಕ್ರಮಗಳ ಉದ್ದೇಶ ಈಡೇರಲು ಸಾಧ್ಯ ಎಂದರು. 

ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್‌.ಬಿರಾದಾರ ಮಾತನಾಡಿ, ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕಾನೂನಿನ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ಕಾರದ ಯೋಜನೆಗಳು ಯಾವ ರೀತಿ ಅನುಷ್ಠಾನವಾಗುತ್ತಿದೆ ಎಂಬುದನ್ನು ಪರೀಶೀಲಿಸಲು ಗ್ರಾಮ ವಾಸ್ತವ್ಯ ಸಹಕಾರಿಯಾಗಿದೆ ಎಂದರು. 

ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹೆಸ್ಕಾಂ ಸಹಾಯಕ ಇಂಜೀನಿಯರ ಶಿವನಗೌಡ ಪಾಟೀಲ, ಕೃಷಿ, ರೇಷ್ಮೆ, ಸಾರಿಗೆ, ಪೊಲೀಸ್ ಇಲಾಖೆ, ಶಿಕ್ಷಣ  ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಸರಕಾರದ ಯೋಜನೆಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು. 


ಸುದ್ದಿ ಓದಿ