ವಿಜಯನಗರ: ಡಿಸಿ ನಡೆ ಹಳ್ಳಿ ಕಡೆ ಹಿನ್ನೆಲೆ ಪೂರ್ವಭಾವಿ ಸಿದ್ಧತಾ ಸಭೆ
ಹೊಸಪೇಟೆ(ವಿಜಯನಗರ) 07: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಜು.16ರಂದು ತಹಶೀಲ್ದಾರ್ ಅವರು ಗ್ರಾಮವಾಸ್ತವ್ಯ ನಡೆಸಲಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಆವರಣದಲ್ಲಿ ತಹಶೀಲ್ದಾರ್ ವಿಶ್ವಜಿತ್ ಮೆಹತಾ ಅವರ ಅಧ್ಯಕ್ಷತೆಯಲ್ಲಿ ಗುರುವಾರದಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ವಿಶ್ವಜಿತ್ ಮೆಹತ ಅವರು ಗ್ರಾಮವಾಸ್ತವ್ಯಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಮತ್ತು ನಾಗೇನಹಳ್ಳಿ ಗ್ರಾಮದಲ್ಲಿ ಪ್ರತಿಮನೆ ಬಾಗಿಲಿಗೆ ಹೋಗಿ ಸರ್ವೆ ಮಾಡಬೇಕು ಹಾಗೂ ದಿನಕ್ಕೆ ಎರಡು ಬಾರಿ ಗ್ರಾಮಕ್ಕೆ ಭೇಟಿ ನೀಡಿ ಕೆಲಸಗಳನ್ನು ಪರೀಶೀಲಿಸಿ ಮಾಹಿತಿಯನ್ನು ತಹಶೀಲ್ದಾರ್ ಕಚೇರಿಗೆ ನೀಡಬೇಕು ಎಂದು ಹೇಳಿದರು.
ಯಾವುದಾದರು ತೊಂದರೆಗಳಿದ್ದಲ್ಲಿ ಸೂಕ್ತ ಕ್ರಮವಹಿಸಬೇಕು. ಗ್ರಾಮವಾಸ್ತವ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಕೃಷಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಇಲಾಖೆಗಳು ಗ್ರಾಮ ವಾಸ್ತವ್ಯದಲ್ಲಿ ಸ್ಟಾಲ್ಗಳನ್ನು ನಿರ್ಮಾಣ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ನರೇಗಾ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ವಿಶ್ವನಾಥ್, ತಾಲೂಕು ಕಚೇರಿಯ ಶೀರಸ್ತೇದಾರ ಶ್ರೀಧರ್, ಹೊಸಪೇಟೆ ಕಂದಾಯ ನೀರೀಕ್ಷಕ ಮಲ್ಲಿಕಾರ್ಜುನಗೌಡ, ನಾಗೇನಹಳ್ಳಿ ಗ್ರಾ.ಪಂ. ಪಿ.ಡಿ.ಓ ಹಾಗೂ ಇತರರು ಇದ್ದರು.