ಗಿರಿ ಸೇವಾ ನಿವೃತ್ತಿ : ನೂತನ ಪ್ರಾಂಶುಪಾಲರಾಗಿ ವಿಜಯಾ ನಾಯ್ಕ ಅಧಿಕಾರ ಸ್ವೀಕಾರ
ಕಾರವಾರ ಮತ್ತು ಸೇವಾ ಅನುಭವ ಖುಷಿ ಕೊಟ್ಟಿದೆ ಹಾಗೂ ಹೆಸರನ್ನು ನೀಡಿತು - ಡಾ.ವೆಂಕಟೇಶ್ ಗಿರಿ
ಕಾರವಾರ: ಕಳೆದ 25 ವರ್ಷಗಳಿಂದ ಕಾರವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಮಾಡಿದ್ದು ಖುಷಿ ಕೊಟ್ಟಿದೆ. ಕಾರವಾರ ನನಗೆ ಹೆಸರು ಸಹ ತಂದು ಕೊಟ್ಟಿತು. ಸೇವಾ ಅವಧಿ ತೃಪ್ತಿಕರವಾಗಿತ್ತು ಎಂದು ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ ಡಾ. ವೆಂಕಟೇಶ್ ಗಿರಿ ನುಡಿದರು.
ಅವರು ಕಾರವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪರವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಸ್ಕೃತ ಉಪನ್ಯಾಸಕನಾಗಿ, ಮುಕ್ತ ವಿವಿ ಸಂಯೋಜಕನಾಗಿ ಕಾರ್ಯನಿರ್ವಹಿಸಿದ ಅನುಭವ ಮನಸ್ಸಿಗೆ ಸಮಾಧಾನ ತಂದಿದೆ. ಕಾಲೇಜಿನ ಗ್ರಂಥಾಲಯವನ್ನು ಸಹ 5 ವರ್ಷ ಹೆಚ್ಚುವರಿಯಾಗಿ ನಿಭಾಯಿಸಿದೆ. ಕಾರ್ಕಳ, ಚಿಕ್ಕಮಗಳೂರುಗಳಲ್ಲಿ ಕೆಲಸ ಮಾಡಿದ್ದೆ. ಕಾರವಾರಕ್ಕೆ ಸರ್ಕಾರಿ ಕಾಲೇಜು ಉಪನ್ಯಾಸಕನಾಗಿ ಬಂದ ಮೇಲೆ ಇಲ್ಲಿಯೇ ಕೆಲಸ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಿದ ತೃಪ್ತಿಯಿದೆ. ನಾನಿಲ್ಲಿ ಬಂದಾಗ ನನ್ನ ಮಕ್ಕಳು ಚಿಕ್ಕವರಿದ್ದರು. ಇಲ್ಲೇ ಶಿಕ್ಷಣ ಕಲಿತ ನನ್ನ ಮಗ ಫ್ರಾನ್ಸನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾನೆ. ನೋಬೆಲ್ ಪಡೆದ ವಿಜ್ಞಾನಿಗಳ ಕೆಳಗೆ ಕೆಲಸ ಮಾಡುತ್ತಿದ್ದು ಇದು ನನಗೆ ತೃಪ್ತಿ ಕೊಟ್ಟಿದೆ. ಮಗನಿಗೆ ಮಂಗಳ ಗ್ರಹಕ್ಕೆ ಹೋಗುವ ಅವಕಾಶ ಸಹ ಇತ್ತು. ಅದನ್ನು ನಾನೇ ತಡೆದೆ. ಹಾಗೂ ವಿಜ್ಞಾನಿಯಾಗಿ ಅನೇಕ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಮಗಳು ಸಹ ಕಾರವಾರಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾಳೆ. ನನ್ನ ಮಕ್ಕಳೇ ನನ್ನ ಆಸ್ತಿ ಎಂದರು. ಪ್ರಾಂಶುಪಾಲರಾಗಿ ಸಹ ಕೆಲಸ ಮಾಡಿದ ಅವಧಿಯಲ್ಲಿ ರೂಸಾದಲ್ಲಿ 5 ಕೋಟಿ ರೂ. ಕಾಲೇಜು ಅಭಿವೃದ್ಧಿಗೆ ಬಂದಿದೆ. ಇದರಲ್ಲಿ ಕಟ್ಟಡಕ್ಕೆ 1.5 ಕೋಟಿ ಇದೆ. ಉಳಿದದ್ದು ಅಕಾಡೆಮಿಕ್ ಅಭಿವೃದ್ಧಿಗೆ ಇದೆ. ಇದನ್ನು ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಯೋಜನೆ ರೂಪಿಸಿ ಎಂದರು. ಇದೇ ವೇಳೆ ಕಾಲೇಜು ಉಪನ್ಯಾಸಕರು ಗಿರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಬಿಳ್ಕೋಟ್ಟರು.
ಇದೇ ವೇಳೆ ಡಾ.ಗಿರಿ ಅವರನ್ನು ಸನ್ಮಾನಿಸಿ ಮಾತನಾಡಿದ ನೂತನ ಪ್ರಾಂಶುಪಾಲರಾದ ಶ್ರೀಮತಿ ವಿಜಯಾ .ಡಿ. ನಾಯ್ಕ ಮಾತನಾಡಿ ಡಾ.ಗಿರಿ ಅವರು ನಿಗರ್ವಿ. ಅವರು ಕಾಲೇಜಿನ ಸಹೋದ್ಯೋಗಿಗಳ ಜೊತೆ ಮನೆಯ ಬಂಧುವಿನಂತೆ ಇದ್ದರು. ಅವರು ಕಾಲೇಜಿಗೆ ದೊಡ್ಡ ಸಂಪತ್ತಾಗಿದ್ದರು. ಅವರು ನಿವೃತ್ತಿ ಹೊಂದಿದ್ದರಿಂದ ಕಾಲೇಜಿಗೆ ನಷ್ಟ. ಅವರ ಮಾರ್ಗದರ್ಶನ ಸದಾ ಈ ಕಾಲೇಜಿನ ಮೇಲಿರುತ್ತದೆ ಎಂದರು. ಕ್ರಿಯಾಶೀಲ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು. ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಉಲ್ಲಾಸ ಶೆಟ್ಟಿ, ಡಾ.ವಸಂತ ಕುಮಾರ್, ಡಾ. ಐ.ಕೆ.ನಾಯ್ಕ.ಡಾ.ಪ್ರಗಾಸಂ, ಶಿವಾನಂದ ಭಟ್, ಮೋಹನ್ ನಾಯ್ಕ, ರಾಜೇಶ್ವರಿ ಭಟ್, ª ವಿದ್ಯಾ ನಾಯಕ ಡಾ.ಗಿರಿಯರ ವ್ಯಕ್ತಿತ್ವದ ಕುರಿತು ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿ ಸದಸ್ಯ ಎಸ್.ಜಿ.ಭಟ್ ಸಹ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಸುಧೀರ ಮನ್ವಾಡಿ, ಬಸವರಾಜ ಲಿಂಬೋರೆ , ಲೋಕೇಶ್ ಎಂ.ಪಿ., ಸಂಜೋತಾ, ಸುಮಯ್ಯ.ಡಾ.ಪ್ರೀತಿ, ಡಾ.ಗೀತಾ , ಕಾಲೇಜಿನ ಸಿಬ್ಬಂದಿಯಾದ ಕಚೇರಿ ಅಧೀಕ್ಷಕ ಸಂತೋಷ ನಾಯ್ಕ, ಮ್ಯಾನೇಜರ್ ಋಚಿಕೇಶ ಬೋಂಕರ್, ಎಸ್ ಡಿಸಿ ಶಂಕರ್, ಅರೆಕಾಲಿಕ ಉಪನ್ಯಾಸಕರಾದ ಗೀತಾ ಮಾರಜ್ಜ, ಮಹೇಶ್ವರಿ , ಭಾವನಾ ಬಾಂದೇಕರ್, ಸೋನಿಯಾ, ಸಂಗೀತಾ ಮುಂತಾದವರು ಉಪಸ್ಥಿತರಿದ್ದರು.