ಕಾರವಾರ

ವಿಡಿಯೋ ಸಂವಾದ ಸಭೆ | ಆಂಬುಲೆನ್ಸ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ

ವಿಡಿಯೋ ಸಂವಾದ ಸಭೆ | ಆಂಬುಲೆನ್ಸ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ
ಕಾರವಾರದ ಸಭೆಯಲ್ಲಿ ಸಚಿವ ಹೆಬ್ಬಾರ, ಡಿಸಿ ಮುಗಿಲನ್ , ಇತರ ಅಧಿಕಾರಿಗಳು

ಕಾರವಾರ ಜಿಲ್ಲೆಗೆ 5 ಕೋಟಿ ರೂ, ಬಿಡುಗಡೆ -

ಕಾರವಾರ 22 : ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ 285 ಕೋಟಿ ಅನುದಾನ ಘೋಷಿಸಿದ್ದು, ಉತ್ತರ ಕನ್ನಡ ಜಿಲ್ಲೆಗೆ 5 ಕೋಟಿ ರೂ.ಬಿಡುಗಡೆಯಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ  ಹೆಬ್ಬಾರ್ ಹೇಳಿದರು. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಆಂಬುಲೆನ್ಸ್ ಹಾಗೂ ಆಕ್ಸಿಜನ್ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಕೋವಿಡ್ ಸೋಂಕಿತರಿಗಾಗಿಯೇ ಒಂದು ಪ್ರತ್ಯೇಕ ಆಂಬುಲೆನ್ಸ್ ಮೀಸಲಿಡಬೇಕು ಎಂದು ಸಚಿವರು  ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾರವಾರದ  ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಗುರುವಾರ ವಿಡಿಯೋ ಸಂವಾದ ಸಭೆಯಲ್ಲಿ ಅವರು  ಮಾತನಾಡಿದರು.

ಕೋವಿಡ್-19 ಎರಡನೆ ಅಲೆ ಹಿನ್ನೆಲೆಯಲ್ಲಿ ಎಲ್ಲರೂ ಅವಶ್ಯಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬರಬಹುದಾದಂತಹ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಹೆಚ್ಚು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ  ಕಾರಣಕ್ಕೂ  ಆಂಬುಲೆನ್ಸ್  ದೊರೆಯಲಿಲ್ಲ  ಎಂಬ  ದೂರು ಸಾರ್ವಜನಿಕರಿಂದ ಕೇಳಿ  ಬರಬಾರದು. ಜಿಲ್ಲಾಧಿಕಾರಿ ಸೇರಿದಂತೆ ಸಂಬಂದಪಟ್ಟ ಎಲ್ಲ ಅಧಿಕಾರಿಗಳು ನಿಗದಿತ ಪ್ರಮಾಣದಲ್ಲಿ ಆಕ್ಸಿಜನ್ ಇರುವಂತೆ ಮತ್ತು ಬೆಡ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸರಕಾರಿ  ಆಸ್ಪತ್ರೆಯಲ್ಲಿ ಬೆಡ್  ಭರ್ತಿಯಾಗಿವೆ ಎಂಬ ಸನ್ನಿವೇಶದಲ್ಲಿ ಮಾತ್ರ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಬೇಕು. ಬಡವರು ಖಾಸಗಿ ಆಸ್ಪತ್ರೆಯಲ್ಲಿ ಫೀಸ್  ತುಂಬಲು ಅಸಕ್ತರಿರುವದರಿಂದ ಇದರ ಬಗ್ಗೆ ವಿಶೇಷ ಗಮನ ನೀಡಬೇಕು ಎಂದರು.

ಕೋವಿಡ್ ನಿಯಂತ್ರಣದ ದೃಷ್ಟಿಯಿಂದ ಸರಕಾರ ಹೋಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಪ್ರತಿಯೊಬ್ಬರೂ ಈ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ರಾಜ್ಯದಲ್ಲಿ ಈಗಾಗಲೇ ಬಹುತೇಕ ದೊಡ್ಡ ಹಬ್ಬ-ಹರಿದಿನಗಳು ಮುಗಿದಿದ್ದು, ಮೇ. 6 ರವೆಗೆ ಜಿಲ್ಲೆಯಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಮದುವೆ ಕಾರ್ಯಕ್ರಮಗಳು ಜರುಗಲಿವೆ. ವೀಕ್ ಎಂಡ್ ಕಫ್ರ್ಯೂ ಜಾರಿಯಲ್ಲಿಯೂ ಸಹ ಶನಿವಾರ, ಭಾನುವಾರ ಸರಕಾರ ಮದುವೆಗೆ ಅವಕಾಶ ಕಲ್ಪಿಸಿದೆ. ಅಲ್ಲದೇ ಮದುವೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಹಾಗೂ ಮುಂಜಾಗ್ರತೆ ವಹಿಸಲು ಆಯಾ ತಹಶೀಲ್ದಾರರಿಗೆ ಜವಾಬ್ದಾರಿ ವಹಿಸಲಾಗಿದೆ. ಜೊತೆಗೆ 50 ಜನರ ಮಿತಿಯನ್ನು ನಿಗದಿಪಡಿಸಿ ಮದುವೆಗೆ ಪಾಸ್ ವಿತರಿಸಲೂ ಸೂಚಿಸಲಾಗಿದೆ. ಹೀಗಾಗಿ ಆಯಾ ತಹಶಿಲ್ದಾರರು ಹಾಗೂ ಪೊಲೀಸ್ ಇಲಾಖೆಯವರು ಹೆಚ್ಚು ಕಾಳಜಿವಹಿಸಿ ಕಾರ್ಯ ನಿರ್ವಹಿಸಬೇಕು. ಎಲ್ಲಿಯೂ  ಕೂಡ  ಸರಕಾರ  ಮದುವೆ  ಮಾಡಲು ಬಿಡಲಿಲ್ಲ ಎನ್ನುವಂತಹ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮ ಪಾಲಿಸುವಂತಹ ಮದುವೆಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದರು.

ಸರಕಾರ ಈಗಾಗಲೇ ವೀಕ್ ಎಂಡ್ ಕಫ್ರ್ಯೂ ಜಾರಿಗೊಳಿಸಿದ್ದು, ಶನಿವಾರ  ಮತ್ತು ಭಾನುವಾರದಂದು ಬೆಳಿಗ್ಗೆ  6 ರಿಂದ 10 ಗಂಟೆಯವರೆಗೆ ಹಾಲು, ಹಣ್ಣು ತರಕಾರಿ ಮತ್ತು  ಮೀನು, ಮಾಂಸ ಮಾರಾಟಕ್ಕೆ ಅವಕಾಶ ನೀಡಿದೆ. ಹೀಗಾಗಿ ಸಂಬಂದಪಟ್ಟ ಎಲ್ಲ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಮಾನವೀಯ ನೆಲೆಗಟ್ಟಿನಲ್ಗಲಿ ಕಾರ್ಯ ನಿರ್ವಹಿಸಬೇಕು. ಕೋವಿಡ್ ನಿಯಂತ್ರಣಕ್ಕಾಗಿ ಈಗಾಗಲೇ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿದ್ದು, ಅದನ್ನು ಮುಂದುವರೆಸಬೇಕು. ಜೊತೆಗೆ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಗ್ರಾಮೀಣ ಹಂತದಲ್ಲಿ ಜನರಿಗೆ ತಿಳುವಳಿಕೆ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹಾಗೂ ಪ್ರಸ್ತುತ ಜಿಲ್ಲೆಯಲ್ಲಿರುವ ಕೋವಿಡ್ ಸೋಂಕಿತರ ಅಂಕಿ-ಸಂಖ್ಯೆಗಳ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಎಸಿ ವಿದ್ಯಾಶ್ರೀ ಚಂದರಗಿ, ಕಿಮ್ಸ್  ನಿರ್ದೇಶಕ ಡಾ. ಗಜಾನನ್ ನಾಯಕ್, ಡಿ ವಾಯ್ ಎಸ್ ಪಿ ಅರವಿಂದ ಕಲಗುಜ್ಜಿ,  ಕಾರವಾರ ತಹಶಿಲ್ದಾರ್ ಆರ್.ವಿ. ಕಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್ . ಪುರುಷೋತ್ತಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಜಿ. ಪದ್ಮಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು..

ಸುದ್ದಿ ಓದಿ