ಮಾಜಿ ಸಚಿವ ಆನಂದ್ಗೆ ಮಾತನಾಡಲು ವಿಷಯವಿಲ್ಲದೆ ತೇಜೋವಧೆಗಿಳಿದಿದ್ದಾರೆ: ವೆಂಕಟೇಶ ನಾಯಕ್ ವಾಗ್ದಾಳಿ
ಕಾರವಾರ 06: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕ್ಷೇತ್ರದ ರಾಜಕೀಯದಲ್ಲಿ ಅಪ್ರಸ್ತುತರಾಗಿರುವುದರಿಂದ, ಸಂಸದ ಅನಂತಕುಮಾರ್ ಹೆಗಡೆ ಅವರ ಅನಾರೋಗ್ಯದ ವಿಷಯವನ್ನು ಎಳೆದುತಂದಿದ್ದಾರೆ. ಇದು ಅವರ ವೈಚಾರಿಕ ದಿವಾಳಿತನ ತೋರಿಸುತ್ತದೆ. ಅವರಿಗೆ ಸಂಸದರನ್ನು ವಿರೋಧಿಸಲು, ಅವರ ತಪ್ಪುಗಳನ್ನು ತೋರಿಸಲು, ಮಾತನಾಡಲು ಈಗ ಯಾವುದೇ ವಿಷಯ ಇಲ್ಲದ ಕಾರಣ ಆರೋಗ್ಯದ ವಿಚಾರವನ್ನು ಮುಂದಿಟ್ಟುಕೊಂಡು ಸಂಸದ ಹೆಗಡೆಯ ತೇಜೋವಧೆ ಮಾಡಲು ಹೊರಟಿರುವುದು ದುರದೃಷ್ಟಕರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್ ವಾಗ್ದಾಳಿ ಮಾಡಿದರು,
ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಆಸ್ನೋಟಿಕರ್ ರಾಜಕೀಯವಾಗಿಯೂ ದಿವಾಳಿ ಹೊಂದುತ್ತಿದ್ದಾರೆ. ತಮ್ಮ ರಾಜಕೀಯ ಭವಿಷ್ಯವನ್ನು ದೇವೇಗೌಡರು ನಿರ್ಧಾರ ಮಾಡುತ್ತಾರೆಂದು ಅವರೇ ಸ್ವತಃ ಹೇಳಿದ್ದಾರೆ. ಸಂಸದ ಅನಂತಕುಮಾರ್ ಭವಿಷ್ಯವನ್ನು ಸ್ವತಃ ಅವರೇ ಕಟ್ಟಿಕೊಂಡು, ಸಂಘಟನೆಗಳ ಮೂಲಕ ಕೇಂದ್ರ ಸಚಿವರೂ ಆದರು. ಆದರೆ ಮಾಜಿ ಸಚಿವ ಆನಂದ್ ಅವರ ಭವಿಷ್ಯವನ್ನು ಮತ್ತೊಬ್ಬರು ನಿರ್ಧರಿಸುವಂಥ ದೈನೇಸಿ ಪರಿಸ್ಥಿತಿಗೆ ಬಂದಿರುವುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಮಾಜಿ ಸಚಿವರಾಗಿರುವ ಆನಂದ್ ಜವಾಬ್ದಾರಿಯುತವಾದ ಸ್ಥಾನದಲ್ಲಿದ್ದು ಸಮಾಜಕ್ಕೆ ಮಾರ್ಗದರ್ಶಕರಾಗಿ ನಿಲ್ಲಬೇಕಾಗಿತ್ತು. ಆದರೆ ಸಂಸದ ಅನಂತಕುಮಾರ್ ಹೆಗಡೆ ಅವರ ಅನಾರೋಗ್ಯವನ್ನು ಮುಂದಿಟ್ಟುಕೊಂಡು ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವುದು ಅವರ ವ್ಯಕ್ತಿತ್ವಕ್ಕೆ ತಕ್ಕುದಲ್ಲ. ಅನಂತಕುಮಾರ್ ಅವರು 25 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದಾರೆ. ರಾಜಕೀಯಕ್ಕೆ ಬರುವ ಪೂರ್ವದಲ್ಲಿ ಹಿಂದುತ್ವದ ಹೋರಾಟ ಮಾಡಿ, ಜನರಲ್ಲಿ ಹಿಂದುತ್ವದ ಅಲೆ ಮೂಡಿಸಿ ಜನಪರ ನಾಯಕರಾಗಿ ಅವರು ರಾಜಕೀಯಕ್ಕೆ ಬಂದವರು. ಅವರಿಗೆ ರಾಜಕೀಯದಲ್ಲಿ ಪಿತ್ರಾರ್ಜಿತ ಎನ್ನುವುದು ಯಾವುದೂ ಇಲ್ಲ. ಅವರು ಆರು ಬಾರಿ ಗೆಲುವು ಕಂಡಿದ್ದಾರೆ. ಆನಂದ್ ಅಸ್ನೋಟಿಕರ್ ಅವರ ವಿರುದ್ಧವೇ 2019ರ ಚುನಾವಣೆಯಲ್ಲಿ ಗೆಲುವು ಕಂಡು ರಾಜ್ಯದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದಿದ್ದು ಇತಿಹಾಸ ಎಂದರು.
ಅನಂತಕುಮಾರ್ ಅವರಿಗೆ ಹೆಚ್ಚುಕಡಿಮೆ ಆದರೆ ತಾವು ಬಿಜೆಪಿಗೆ ಬಂದು ರಾಜಕೀಯಕ್ಕೆ ಎಂಟ್ರಿ ಆಗಬಹುದು ಎಂದು ಮಿತ್ರರು ಹೇಳಿದ್ದಾರೆ ಎಂದು ಆನಂದ್ ಹೇಳಿದ್ದಾರೆ. ಆದರೆ ಅದು ಮಿತ್ರರು ಹೇಳಿದ್ದಾರೋ, ಸ್ವತಃ ತಾವೇ ಹೇಳಿಕೊಂಡಿದ್ದೋ ಅದು ಅವರಿಗೇ ಬಿಟ್ಟಿದ್ದು. ಆನೆ ನಡೆದು ಹೋಗುವಾಗ ಬಹಳಷ್ಟು ಜನ ನಿಂತು ನೋಡುತ್ತಾರೆ. ಕೆಲವರು ದೇವರೆಂದು ಕೈ ಮುಗಿಯುತ್ತಾರೆ. ಅದರ ಗಾಂಭೀರ್ಯತೆ ನೋಡಿ ಇನ್ನು ಕೆಲವರು ಒಂದು ಕ್ಷಣ ನಿಂತು ಗೌರವಿಸುತ್ತಾರೆ. ಅದೇ ಸಂದರ್ಭದಲ್ಲಿ ಕೆಲವೊಂದು ಶಬ್ದ ಮಾಡುವ ವ್ಯವಸ್ಥೆಯೂ ನಡೆಯುತ್ತದೆ. ಅದೇ ಶಬ್ದ ಈಗಿನ ಆನಂದ್ ಹೇಳಿಕೆ. ರಾಜಕೀಯದಲ್ಲಿ ಅವರೆಷ್ಟು ಪ್ರಸ್ತುತರಾಗಿದ್ದಾರೆ ಎನ್ನುವುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಸಹ ವಕ್ತಾರ ಸದಾನಂದ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ನಾಯ್ಕ, ಎನ್.ಎಸ್.ಹೆಗಡೆ, ಜಿಲ್ಲಾ ವಿಶೇಷ ಆಹ್ವಾನಿತ ಮನೋಜ್ ಭಟ್ ಹಾಜರಿದ್ದರು.