ಶಿಗ್ಗಾವ್

ವೀರಭದ್ರೇಶ್ವರ ಜಯಂತ್ಯೋತ್ಸವ

ವೀರಭದ್ರೇಶ್ವರ ಜಯಂತ್ಯೋತ್ಸವ

ಲೋಕದರ್ಶನ ವರದಿ 

ಶಿಗ್ಗಾವಿ 28:  ವೀರಭದ್ರೇಶ್ವರ ಜಯಂತ್ಯೋತ್ಸವ ಆಗಸ್ಟ್‌ 30ರಂದು ಆಚರಿಸಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪುರೋಹಿತ ಮತ್ತು ಅರ್ಚಕರ ಘಟಕದ ರಾಜ್ಯ ಉಪಾಧ್ಯಕ್ಷ ಚಿಕ್ಕಬೆಂಡಿಗೇರಿ ಗ್ರಾಮದ ವೇ.ಮೂ ಸಂತೋಷ ಕುಮಾರಯ್ಯಾ ಶಾಸ್ತ್ರಿಗಳು ತಿಳಿಸಿದ್ದಾರೆ. 

ನಮ್ಮ ಸನಾತನ ಧರ್ಮದಲ್ಲಿ  33 ಕೋಟಿ ದೇವತೆಗಳಿದ್ದು, ಒಂದೊಂದು ಕಾಲಗಟ್ಟದಲ್ಲಿ ನಡೆಯುವ ಅನ್ಯಾಯ, ಅಧರ್ಮ, ಅನೀತಿಗಳನ್ನು ತಡೆಯಲು ದುಷ್ಟರನ್ನು ಶಿಕ್ಷಿಸಲು ಹಾಗೂ ಶಿಷ್ಟರನ್ನು ರಕ್ಷಿಸಲು ದೇವತೆಗಳು ಒಂದಲ್ಲ ಒಂದು ಅವತಾರವನ್ನು ತಾಳುವುದು ನಮಗೆ ತಿಳಿದಿರುವ ವಿಷಯ. ಇಂತಹದೇ ಒಂದು ಆ ಮಹಾದೇವ ಬೋಳಾಶಂಕರನ ಅವತಾರವಾದ ವೀರಭದ್ರನು ದಕ್ಷ ಬ್ರಹ್ಮನ ಸಂಹಾರಕ್ಕಾಗಿ ಮತ್ತು ಶೈವ ಪರಂಪರೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವ ಸಲುವಾಗಿ ಜನ್ಮ ತಾಳಿದನು. 

ವೀರಭದ್ರ ಈ ಹೆಸರನ್ನು, ಪುರಾಣದಲ್ಲಿ ವೀರಭದ್ರೇಶ್ವರನ ಕಥೆಯನ್ನು ಕೇಳದವರಿಲ್ಲ. ವೀರಭದ್ರನೆಂದರೆ ತನ್ನ ವೀರ, ಶೌರ್ಯದ ಮೂಲಕ ತನ್ನನ್ನು ನಂಬಿದವರಿಗೆ ಭದ್ರತೆಯನ್ನು ಕಲ್ಪಿಸುವವನೇ ವೀರಭದ್ರ. ಈ ವೀರಭದ್ರನ ಜನ್ಮವು ಭಾದ್ರಪದ ಮಾಸದ ಮೊದಲನೇ ಮಂಗಳವಾರದಂದು ಆಯಿತು ಎಂದು ಇತಿಹಾಸ ತಿಳಿಸುತ್ತದೆ. 

 ಹಲವು ಕ್ಷೇತ್ರಗಳಲ್ಲಿ ಶ್ರೀ ವೀರಭದ್ರೇಶ್ವರನ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸ ಲಾಗುತ್ತಿರುವುದು  ಮತ್ತು ಕೃತಿಗಳು, ಶ್ರೀ ವೀರಭದ್ರೇಶ್ವರ ಒಡಪುಗಳು, ವಚನ ಸಾಹಿತ್ಯಗಳನ್ನು ಅಧ್ಯಯನ ಮಾಡಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು 2019 ರಿಂದ ಭಾದ್ರಪದ ಮಾಸದ ಮೊದಲನೇ ಮಂಗಳವಾರದಂದು ಇಡೀ ವಿಶ್ವದಾದ್ಯಂತ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಜಾರಿಗೆ ತಂದು ಆಚರಿಸಿದ ಕೀರ್ತಿ ಸಂಘಟನೆಗೆ ಸಲ್ಲುತ್ತದೆ. ಅಂದಿನಿಂದ ಇಂದಿನವರೆಗೆ ಸುಮಾರು 4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತಾ ಬಂದಿದೆ. 

ಈ ವರ್ಷವು ಆಗಸ್ಟ್‌ 30 ರಂದು ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಪ್ರತಿ ಮನೆ ಮನೆಯಲ್ಲಿ, ಗ್ರಾಮದಲ್ಲಿ, ನಗರಗಳಲ್ಲಿ ಒಟ್ಟಾರೆ ಇಡೀ ವಿಶ್ವದಾದ್ಯಂತ ಆಚರಿಸುವುದರ ಜೊತೆಗೆ ಪ್ರತಿಯೊಬ್ಬರು ಸಹ ಆ ವೀರಭದ್ರೇಶ್ವರನ ಕೃಪೆಗೆ ಪಾತ್ರರಾಗಿ ಸಕಲ ಇಷ್ಟಾರ್ಥವನ್ನು ಪಡೆಯುತ್ತಿರೆಂದು ಈ ಮೂಲಕ ಪ್ರಕಟನೆಗೆ ತಿಳಿಸಿದ್ದಾರೆ. 


ಸುದ್ದಿ ಓದಿ