ವಚನ ಸಾಹಿತ್ಯ ಬೆಳಕಿಗೆ ಬಂದಿದ್ದು, ಶರಣ ಫ.ಗು.ಹಳಕಟ್ಟಿ ಅವರ ಪರಿಶ್ರಮದಿಂದ
ಶಿವಾನುಭವದ ಮೂಲಕ ಶರಣ ಸಾಹಿತ್ಯವನ್ನು ನಾಡಿಗೆ ಪರಿಚಯಿಸಿದರು
ಧಾರವಾಡ 02: ಕನ್ನಡ ನಾಡಿಗೆ ಹೊಸ ಮಾರ್ಗದ ಮೂಲಕ ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕಾಂತಿಗೆ ಕಾರಣವಾದ ಮತ್ತು 12 ನೇ ಶತಮಾನದ ಬಸವಾದಿ ಪ್ರಮಥರು ಬರೆದ ವಚನಗಳನ್ನು ಸಂರಕ್ಷಿಸಿ, ನಾಡಿಗೆ ಪರಿಚಯಿಸಿ ಪ್ರಚುರಪಡಿಸಿದ್ದು ಶರಣ ಫ.ಗು.ಹಳಕಟ್ಟಿ ಅವರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಆಲೂರು ವೇಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಜನ್ಮದಿನದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ವಚನ ಗುಮ್ಮಟ ಎಂದು ಅಭಿದಾನ ಹೊಂದಿದ್ದ ಫ.ಗು.ಹಳಕಟ್ಟಿ ಅವರು ಕನ್ನಡ ನಾಡಿನ ಮನೆಮನೆಗೆ ಹೋಗಿ ವಚನದ ಕಟ್ಟುಗಳನ್ನು ಸಂಗ್ರಹಿಸಿ, ತನ್ಮ ಶಿವಾನುಭವ ಪತ್ರಿಕೆ ಮೂಲಕ ಪ್ರಕಟಿಸಿದರು. ಅವುಗಳ ಮೇಲೆ ಅಂದಿನ ವಿದ್ವಾಂಸರಿಂದ, ಸಮಾಜದ ಮುಖಂಡರಿಂದ, ಸ್ವಾಮಿಜೀಗಳಿಂದ ವಿಶ್ಲೇಷಣೆ, ಅಭಿಪ್ರಾಯ ಬರೆಸಿದರು. ಡಾ.ಫ.ಗು.ಹಳಕಟ್ಟಿ ಅವರ ಪರಿಶ್ರಮದಿಂದಾಗಿಯೇ ವಚನ ಸಾಹಿತ್ಯ ಉಳಿದು, ಬೆಳೆದು ಬಂದಿದೆ ಎಂದು ಅವರು ಹೇಳಿದರು.
ಡಾ.ಫ.ಗು.ಹಳಕಟ್ಟಿ ಅವರು ತಮ್ಮ ಜೀವನದುದ್ದಕ್ಕೂ ವಚನ ಸಾಹಿತ್ಯದ ಸಂಶೋಧನೆ, ಪ್ರಕಟಣೆಗಾಗಿ ಹಗಲಿರುಳು ಶ್ರಮಿಸಿದರು. ಸಮಾಜಕ್ಕೆ ಹೊಸ ಶರಣ ಮಾರ್ಗ ತೋರಿದರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೆರಿ ಸ್ವಾಗತಿಸಿದರು. ಡಾ.ಫ.ಗು.ಹಳಕಟ್ಟಿ ಅವರ ಜೀವನ ಮತ್ತು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಕುರಿತು ಹಿರಿಯ ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಈಶ್ವರ ಹು.ಕಡ್ಲಿಮಟ್ಟಿ, ಬಸವರಾಜ ಕೊಂಗಿ, ಸದಾನಂದ ಶಾಂತಪ್ಪ ಹಳಕಟ್ಟಿ ಸೇರಿದಂತೆ ಅನೇಕ ಮುಖಂಡರು, ಹಳಕಟ್ಟಿ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.