ಪ್ರವಾಹದಲ್ಲಿ ನಲುಗಿದ ಉತ್ತರ ಕನ್ನಡ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ನದಿಗಳು ತುಂಬಿ ಹರಿದಿದ್ದು, ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳಿಂದ ಪ್ರವಾಹ ಉಂಟಾಗಿದೆ. ಕದ್ರಾ ಅಣೆಕಟ್ಟು, ಕೊಡಸಳ್ಳಿ ಅಣೆಕಟ್ಟು ಭಾಗದಲ್ಲಿ ಹಾಗೂ ಹಿನ್ನೀರು ಪ್ರದೇಶದಲ್ಲಿ ಗುರುವಾರ ಹಗಲು ಮತ್ತು ರಾತ್ರಿ ಸತತ 3 ತಾಸು ಮೇಘಸ್ಪೋಟದ ಪರಿಣಾಮ 2 ಲಕ್ಷ 20 ಸಾವಿರ ಕ್ಯೂಸೆಕ್ಸ ನೀರು ಅಣೆಕಟ್ಟಿಗೆ ಹರಿದು ಬಂತು, ಸತತವಾಗಿ ಕದ್ರಾ ಅಣೆಕಟ್ಟಿನಿಂದ 1.50 ಲಕ್ಷ ಕ್ಯೂಸೆಕ್ಸ ನೀರನ್ನು ನದಿಗೆ ಹರಿಸಿ ಹೆಚ್ಚಿನ ಪ್ರವಾಹ ಉಂಟಾಗದಂತೆ ಎಚ್ಚರವಹಿಸಲಾಯಿತು.
ನದಿ ದಂಡೆ 73 ಗ್ರಾಮಗಳ 5000ಕ್ಕೂ ಹೆಚ್ಚು ಜನರನ್ನು 48 ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕದ್ರಾ, ಮಲ್ಲಾಪುರ, ಹಣಕೋಣ, ಬೋರಿಬಾಗ, ಕಿನ್ನರ ಸೇರಿದಂತೆ 27 ಗ್ರಾಮಗಳು ಕಾರವಾರ ತಾಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಿವೆ. ಈ ಗ್ರಾಮಗಳ 884 ಜನರನ್ನು 15 ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಲ್ಲಾಪುರದ ಗಾಂಧಿ ನಗರದ ಒಂದೇ ಕುಟುಂಬದ 4 ಜನರನ್ನು ದೋಣಿಯ ಮೂಲಕ ಪ್ರವಾಹದಿಂದ ರಕ್ಷಿಸಲಾಗಿದೆ. ಇವರು ಮನೆಯಿಂದ ಕಾಳಜಿ ಕೇಂದ್ರಕ್ಕೆ ಬರಲು ನಿರಾಕರಿಸಿದ್ದರು. ನಂತರ ಪ್ರವಾಹದಲ್ಲಿ ಸಿಲುಕಿಕೊಂಡರು. ನೇವಿಯಿಂದ ಹೆಲಿಕಾಪ್ಟರ್ ನೆರವು ಪಡೆದು ಗಾಂಧಿನಗರದ ಕುಟುಂಬ ರಕ್ಷಣೆಗೆ ಯತ್ನಿಸಲಾಯಿತು. 2.30ರ ಸುಮಾರಿಗೆ ಈ ಯತ್ನ ನಡೆಯುತ್ತಿದ್ದಾಗಲೇ, ದೋಣಿಯ ಸಹಾಯದಿಂದ ಎನ್ಡಿಆರ್ಎಫ್ ಟೀಮ್ ಕುಟುಂಬದ ನಾಲ್ವರನ್ನು ರಕ್ಷಿಸಿತು.
ಗೋಟೇಗಾಳಿ ಕುಡಿಯುವ ನೀರಿನ ಟ್ಯಾಂಕ್ ಮೇಲೆ ಕುಳಿತು ಸಹಾಯಕ್ಕೆ ಅಂಗಲಾಚುತ್ತಿದ್ದ ಈರ್ವರ ರಕ್ಷಣೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಯಲ್ಲಾಪುರ ಕಾಡಿನಲ್ಲಿ ಬಿರಡೆ ಫಾಲ್ಸ ನೋಡಲು ತೆರಳಿದ್ದ 6 ಜನ ಹುಬ್ಬಳ್ಳಿಯ ಯುವಕರನ್ನು ಪೊಲೀಸರು , ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಇನ್ನು ಬಾರೀ ಮಳೆಗೆ ಜಿಲ್ಲೆಯ ವಿವಿದೆಡೆ 9 ಮನೆಗಳು ಪೂರ್ಣ ಕುಸಿದಿದೆ. 75 ಮನೆಗಳು ಭಾಗಶಃ ಹಾನಿಯಾಗಿವೆ. ಮಳೆ ನಿಂತ ನಂತರ ನಿಖರ ಮಾಹಿತಿ ಸಿಗಲಿದೆ.
ಇಬ್ಬರ ಮರಣ :
ಹೊನ್ನಾವರ ಮಾಳ್ಕೋಡಿಮ ಮಾದೇವಿ ಸುಬ್ರಾಯ ಅಂಬಿಗ ಮತ್ತು ಆಕೆಯ ಪತಿ ಸಂಪ್ರದಾಯಿಕ ದೋಣಿಯಲ್ಲಿ ಮೀನು ಹಿಡಿಯಲು ತೆರಳಿದಾಗ ಪತ್ನಿ ಮಾದೇವಿ ಮೃತಪಟ್ಟ ದುರ್ಘಟನೆ ನಡೆದಿದೆ. ಶಿರಸಿಯಲ್ಲಿ ಓರ್ವರು ಕೃಷಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ, ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಅಂಕೋಲಾದ ಶಿರೂರಿನಲ್ಲಿ ಇಬ್ಬರು ಯುವಕರು ದೋಣಿ ಮುಗುಚಿ ಕಾಣೆಯಾಗಿದ್ದಾರೆ. ಇವರಿಗಾಗಿ ಹುಡುಕಾಟ ನಡೆದಿದೆ.
ಹೆದ್ದಾರಿಗಳು ಬಂದ್ - ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ :
ಭಾರೀ ಮಳೆಯಿಂದ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಂಕೋಲಾ-ಹುಬ್ಬಳ್ಳಿ ಮಧ್ಯೆ ರಸ್ತೆ ಸಂಚಾರ ರದ್ದಾಗಿದೆ. ಅರಬೈಲ್ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿದಿದೆ. ಅಪಾರ ಪ್ರಮಾಣದ ಗುಡ್ಡ ಸಹಿತ ರಸ್ತೆ ಕುಸಿದ ಪರಿಣಾಮ ವಾಹನ ಸಂಚಾರ ನಿಷೇಧಿಸಲಾಗಿದೆ. ಸುಂಕಸಾಳ ಬಳಿ ಗಂಗಾವಳಿ ನದಿ ನೀರು ಹೆದ್ದಾರಿಯನ್ನು ಆವರಿಸಿದ್ದು, ರಸ್ತೆ ಸಂಚಾರ ಪೂರ್ಣ ನಿಂತಿದೆ. ಅಣಶಿ ಘಟ್ಟದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ಕುಮಟಾ ಶಿರಸಿ ಮಧ್ಯೆ ಉಪ್ಪಿನ ಪಟ್ಟಣ ಎಂಬಲ್ಲಿ ಗುಡ್ಡದ ಮಣ್ಣು ರಸ್ತೆಗೆ ಕುಸಿದಿದೆ. ಮಣ್ಣು ತೆಗೆಯುವ ಕ್ರಿಯೆ ನಡೆದಿದೆ. ಭಾರೀ ಮಳೆಯಿಂದ ಅದೇ ಭಾಗದಲ್ಲಿ ಅಘನಾಶಿನಿ ನೀರು ರಸ್ತೆ ಆವರಿಸಿದೆ. ವಾಹನ ಸಂಚಾರ ರದ್ದಾಗಿದೆ. ಘಟ್ಟದ ಮೇಲಿನವರು ಘಟ್ಟದಿಂದ ಕರಾವಳಿಯ ಪಟ್ಟಣ ತಲುಪಲು ಇದೀಗ ಜಿಲ್ಲಾಡಳಿತ ಮತ್ತು ತಾಲೂಕಾ ಆಡಳಿತಗಳಿಗೆ ಪರ್ಯಾಯ ವ್ಯವಸ್ಥೆಗೆ ಮನವಿ ಮಾಡುತ್ತಿದ್ದಾರೆ.
.........
ಘಟ್ಟದವರು ಘಟ್ಟದ ಮೇಲೆ - ಕರಾವಳಿಯವರು ಕರಾವಳಿಯಲ್ಲಿ ;
ಹೊನ್ನಾರವ -ಶಿರಸಿಲ್ಲಿ ತಲಾ ಒಬ್ಬರು ಮಳೆಗೆ ಬಲಿ - ಅಂಕೋಲಾದ ಶಿರೂರಿನಲ್ಲಿ ಇಬ್ಬರು ಕಾಣೆ :
ರಸ್ತೆ ಸಂಪರ್ಕ ಕಡಿತ ್ಷ ಅರಬೈಲ್ ಘಟ್ಟ, ಅಣಶಿ ಘಟ್ಟದಲ್ಲಿ ರಸ್ತೆ ಸಂಚಾರ ಬಂದ್ ; ದೇವಿಮನೆ ಘಟ್ಟದಲ್ಲಿ ಸಹ ವಾಹನ ಸಂಚಾರ ಸ್ಥಗಿತ : ಉಪ್ಪಿನಪಟ್ಟಣ ಬಳಿ ಅಘನಾಶಿನಿ ನದಿ ನೀರು