ಕಾರವಾರ

ಉತ್ತರ ಕನ್ನಡ : ನರೇಗಾ ಯೋಜನೆಯ ಕೆಲಸ ಕೂಡಲೇ ಪ್ರಾರಂಭಿಸಿ - ಸಿಇಒ ಪ್ರಿಯಾಂಗಾ

ಉತ್ತರ ಕನ್ನಡ : ನರೇಗಾ ಯೋಜನೆಯ ಕೆಲಸ ಕೂಡಲೇ ಪ್ರಾರಂಭಿಸಿ - ಸಿಇಒ ಪ್ರಿಯಾಂಗಾ

ಕಾರವಾರ 18: ನರೇಗಾ ಯೋಜನೆಯಡಿ ನಡೆಯುತ್ತಿರುವ ಕೆಲಸ ನಿಂತು ಹೊಗಿದ್ದರೆ,  ಕೆಲಸವನ್ನು ಕೂಡಲೇ ಆರಂಭಿಸಬೇಕು. ಕಳೆದ ವರ್ಷ ಕೈಗೊಳ್ಳಲಾದ ಕಾಮಗಾರಿ  ಕೆಲಸವನ್ನು ಕೂಡಲೇ ಆರಂಭಿಸುವ ಜೊತೆಗೆ ಕೆಲಸದ ಅಂದಾಜು ಪಟ್ಟಿ ಸಲ್ಲಿಸುವಂತೆ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಆದೇಶಿಸಿದರು.  

ಶುಕ್ರವಾರ ಜಿಲ್ಲಾ ಪಂಚಾಯತ್  ಸಭಾ ಭವನದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಪಂಚಾಯತ್  ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಅವರ ಕಾರ್ಯಕ್ಷಮತೆ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿ,  ಸ್ವ ಸಹಾಯ ಸಂಘದ ಸದಸ್ಯರು ಮತ್ತು ನರೇಗಾ ಕಾರ್ಡ ಹೊಂದಿರುವ ವರಿಗೆ  ಪ್ರಧಾನ ಮಂತ್ರಿ  ಜೀವನ ಜ್ಯೋತಿ ಇನ್ಸೂರೆನ್ಸ್‌ ಯೋಜನೆಯಡಿ ತಪ್ಪದೇ ನೋಂದಣಿ, ನವೀಕರಣ ಮಾಡಿಸುವಂತೆ ಸಹ ಸೂಚಿಸಿದರು. ವಿವಿಧ ಅಂಗನವಾಡಿಗಳಲ್ಲಿ ಕೈಗೊಳ್ಳಲಾದ ಕಾಮಗಾರಿಯ ಮಾಹಿತಿ ಪಡೆದ ಸಿಇಒ ಕೆಲಸದ ಪ್ರಗತಿ ನೋಡಿ ಹಣವನ್ನು ಕೂಡಲೇ ಬಿಡುಗಡೆ ಮಾಡುತ್ತೇನೆ ಎಂದರು. ಅಂಕೋಲಾ ತಾಲೂಕಿನಲ್ಲಿ ಕೈಗೊಂಡ ಕೆಲಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಉಳಿದ ತಾಲೂಕಿನಲ್ಲಿ ಕೆಲಸ ಇನ್ನಷ್ಟು ಪ್ರಗತಿ ಸಾಧಿಸಬೇಕೆಂದರು.    ಪ್ರತಿಯೊಂದು ತಾಲೂಕು ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಸೋಲಾರ ಪ್ಯಾನಲ್ ಅಳವಡಿಸಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ಐಸೋಲೇಶನ್ ಸೆಂಟರ್ ತೆರೆಯಬೇಕು ಅದಕ್ಕಾಗಿ ಶೌಚಾಲಯ, ಲೈಟ್, ನೀರು ವ್ಯವಸ್ಥೆ ಇರುವಂತಹ ಕಟ್ಟಡ ಗುರುತಿಸಬೇಕೆಂದು ಹೇಳಿದರು.  

ಅಲ್ಲದೇ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಮೇಳ ಆಯೋಜಿಸಲಾಗುತ್ತಿದ್ದು, ಇದಕ್ಕೆ ಆಯಾ  ತಾಲೂಕಿನವರು  ತಮ್ಮ  ಭಾಗದಲ್ಲಿ ವ್ಯಾಕ್ಸಿನೇಷನ್ ಕೊಡಿಸುವಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು  ಹೇಳಿದರು.  ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ತೆಗೆದುಕೊಳ್ಳದೇ ಇರುವ ಗ್ರಾಮ ಮತ್ತು ಇತರ ಸಂಘ ಸಂಸ್ಥೆಗಳ ಮಾಹಿತಿಯನ್ನು ಪಡೆದು,  ಗ್ರಾಮದಲ್ಲಿ ವ್ಯಾಕ್ಸಿನೇಷನ್ ಮೇಳ ಇರುವ ಸಂದರ್ಭದಲ್ಲಿ ವಾಹನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು,  ಆಯಾ  ತಾಲೂಕು ವ್ಯಾಪ್ತಿಯಲ್ಲಿ ಇರುವ ಇತರ ಇಲಾಖೆಯ ವಾಹನವನ್ನು ಬಳಸಿಕೊಳ್ಳುವ ಜೊತೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಸಿಇಒ ಪ್ರಿಯಾಂಗಾ ಹೇಳಿದರು. 

ಪ್ಯಾಮಿಲಿ ಟಾಸ್ಕಪೋರ್ಸ ; 

ಪ್ಯಾಮಿಲಿ ಟಾಸ್ಕಪೋರ್ಸನ್ನು ಮಜಿರೆ ವ್ಯಾಪ್ತಿಯಲ್ಲಿ ಮಾಡಬೇಕು,  50 ಕುಟುಂಬಕ್ಕೆ ಒಬ್ಬರನ್ನು ಗುರುತಿಸುವ ಜೊತೆಗೆ  ಮಜಿರೆಯ ಸಂಖ್ಯೆಯನ್ಬು ನೀಡಬೇಕೆಂದು ಸೂಚಿಸಿದರು. 

ಮಕ್ಕಳ ಕಾರ್ಯಪಡೆಯ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಕ್ಕಳ ಸಂಖ್ಯೆಯ ಮಾಹಿತಿ ನೀಡಬೇಕು.  ಮಕ್ಕಳನ್ನು ದತ್ತು ತೆಗೆದುಕೊಳ್ಳುವವರು ಇದ್ದಲ್ಲಿ ಅವರನ್ನು ಗುರುತಿಸುವಂತೆ ಸಿಇಒ ಪ್ರಿಯಾಂಗಾ  ಸಲಹೆ ನೀಡಿದರು. 

ಸ್ವಚ್ಚ ಭಾರತ ಮಿಷನ್ ಯೋಜನೆಯ  ಘನ ತ್ಯಾಜ್ಯ ಘಟಕದ ಬಗ್ಗೆ ಮಾಹಿತಿ ಪಡೆದ ಸಿಇಒ,  ಸ್ವಚ್ಛ ಸಂರ್ಕೀಣದಲ್ಲಿ ಕಾರ್ಯನಿರ್ವಾಹಿಸುವ ಡ್ರೈವರ್  ಗಳಿಗೆ  ಗ್ರಾಮ  ಪಂಚಾಯತಿನಿಂದ ವೇತನ ನೀಡಲು ಅವಕಾಶ ಇಲ್ಲ. ಈ ತರ ಆಗಿದ್ದರೆ ತಾಲೂಕು ಪಂಚಾಯತ್  ಕಾರ್ಯನಿರ್ವಾಹಕ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ  ಮಾಡುವುದಾಗಿ ಎಚ್ಚರಿಸಿದರು. ಗ್ರಾಮ ಪಂಚಾಯತ್‌ನಲ್ಲಿ  ಘನ ತ್ಯಾಜ್ಯ ನಿರ್ಮಿಸಲು ಜಾಗದ ತೊಂದರೆ ಇದ್ದಲ್ಲಿ  ಮಾಹಿತಿ ನೀಡಬೇಕು.  ಜಾಗ ಇಲ್ಲದೇ ಇರುವವರು ಬಹು ಗ್ರಾಮ ಘನ ತ್ಯಾಜ್ಯ ಕಾರ್ಯ ರೂಪಕ್ಕೆ ತರುಬೇಕೆಂದರು.   

ಅಗಸ್ಟ್‌ 31 ರೊಳಗೆ ಘನ ತ್ಯಾಜ್ಯ ಘಟಕದ ಕಟ್ಟಡ ಪೂರ್ಣಗೊಳಿಸಬೇಕಾಗಿದ್ದು,  ಪ್ರತಿ ಹತ್ತು ದಿನಕ್ಕೆ ಮಾಹಿತಿ ನೀಡಬೇಕು. ಯಾವ ಯಾವ ಪ್ರವಾಸಿ ತಾಣದಲ್ಲಿ ಶೌಚಾಲಯ ಇದೆ ಮತ್ತು ಯಾವ ಪ್ರವಾಸಿ ತಾಣದಲ್ಲಿ ಶೌಚಾಲಯ ಬೇಕು ಎನ್ನುವ ಬಗ್ಗೆ ನೀಡಿ,  ಕಟ್ಟಡ ಕಟ್ಟಲು ಸಮಸ್ಯೆಯಾದ್ದಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸುವ ವ್ಯವಸ್ಥೆ ಮಾಡಲಾಗುವುದೆಂದರು. ಜಿಲ್ಲೆಯಲ್ಲಿನ ಗ್ರಾಮಗಳನ್ನು  ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕಾಗಿದ್ದು ಇದಕ್ಕಾಗಿ ಶೀಘ್ರದಲ್ಲಿ ಒಂದು ಕ್ರಿಯಾ ಯೊಜನೆ ರೂಪಿಸಿ ಕೊಡಿ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ನಾಗೇಶ್ ರಾಯ್ಕರ್ (ಆಡಳಿತ), ಎನ್‌. ಜಿ. ನಾಯಕ್ (ಅಭಿವೃದ್ಧಿ), ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಉಪಸ್ಥಿತರಿದ್ದರು. 


ಸುದ್ದಿ ಓದಿ