ಇಂಡಿ

ಸರಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ : ಬಸವರಾಜ

ಸರಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ : ಬಸವರಾಜ
ನಗರದ ಅಂಜುಮನ್ ಮಕ್ರದ್ ಮಸೀದಿಯಲ್ಲಿ ಕ್ಷಯರೋಗ ಮತ್ತು ಕೋವಿಡ್-19 ಬಗ್ಗೆ ಆರೋಗ್ಯ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ

ಇಂಡಿ 19: ಫೋಷಣೆ ಯೋಜನೆ ಅಡಿಯಲ್ಲಿ ಪೌಷ್ಠಿಕ ಆಹಾರ ಸೇವನೆಗಾಗಿ 3000 ರೂ ಸರಕಾರವೇ ರೋಗಿಯ ಖಾತೆಗೆ ಜಮಾ ಮಾಡುತ್ತಿದೆ. ಸಾರ್ವಜನಿಕರು ಸರಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕ್ಷಯರೋಗ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಬಸವರಾಜ ಪಾಟೀಲ ಕರೆ ನೀಡಿದರು.

ಶುಕ್ರವಾರ ನಗರದ ಅಂಜುಮನ್ ಮಕ್ರದ್ ಮಸೀದಿಯಲ್ಲಿ ಕ್ಷಯರೋಗ ಮತ್ತು ಕೋವಿಡ್-19 ಬಗ್ಗೆ ಆರೋಗ್ಯ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ಜ್ವರ ಇರುವವರು ಕೂಡಲೆ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಕೊಳ್ಳಬೇಕು. ಕಫದಲ್ಲಿ ರಕ್ತ ಬೀಳುವುದು, ಸಂಜೆ ವೇಳೆ ಜ್ವರ ಬರುವುದು, ಮೈ ಬೆವರುವುದು, ತೂಕ ಕಡಿಮೆಯಾಗುವುದು, ಹಸಿವಾಗದೇ ಇರುವುದು ಶರೀರದ ಯಾವುದೇ ಭಾಗದಲ್ಲಿ ಗಂಟುಗಳಾಗುವುದು, ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ. ಹೀಗಾಗಿ ಎರಡು ಬಾರಿ ಕಫ ಪರೀಕ್ಷೆ ಮಾಡುವುದರಿಂದ ಕ್ಷಯರೋಗ ಇರುವ ಬಗ್ಗೆ ಕಂಡು ಹಿಡಿಯಬಹುದಾಗಿದೆ ಎಂದರು. ಕ್ಷಯರೋಗಕ್ಕೆ ಸರಕಾರವೇ ಆರೋಗ್ಯ ಇಲಾಖೆಯಿಂದ ಉಚಿತ ಚಿಕಿತ್ಸೆ ನೀಡುತ್ತಿದೆ.

ಜಿಲ್ಲಾ ಕ್ಷಯ ನಿರ್ಮೂಲನಾ ಅಧಿಕಾರಿ ಡಾ. ಈರಣ್ಣ ಧಾರವಾಡಕರ್ ಮಾತನಾಡಿ ಕ್ಷಯರೋಗ ಗಾಳಿ ಮೂಲಕ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಸೀನಿದಾಗ, ಕೆಮ್ಮಿದಾಗ, ಎಲ್ಲೆಂದರಲ್ಲಿ ಉಗುಳಿದಾಗ ಕ್ರಿಮಿಗಳು ಗಾಳಿಯ ಮೂಲಕ ಆರೋಗ್ಯವಂತರ ಶರೀರದಲ್ಲಿ ಹರಡಿ ಕ್ಷಯ ರೋಗಕ್ಕೆ ತುತ್ತಾಗಬಹುದಾಗಿದೆ ಎಂದ ಅವರು ಇಡೀ ವಿಶ್ವವನ್ನೇ ಬೆಚ್ಚಿಸಿದ ಕೊರೋನಾದಿಂದ ದೇಶದಲ್ಲಿ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ. ಹೀಗಾಗಿ ಜನರು ಜಾಗೃತರಾಗಬೇಕಿದೆ. ಮನೆಯಿಂದ ಹೊರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಹೆಚ್ಚು ಜನ ಸಂಖ್ಯೆ ಸೇರಿದಲ್ಲಿ ಹೋಗಲೇಬಾರದು, ಆದಷ್ಟರ ಮಟ್ಟಿಗೆ ಎಲ್ಲ ಕಾರ್ಯಕ್ರಮಗಳನ್ನು ಸ್ವಲ್ಪ ದಿ ಮುಂದೂಡುವುದು ಒಳಿತಾಗಿದೆ ಎಂದರು.

ಈ ಸಂದರ್ಭದಲ್ಲಿ ಅಂಜುಮನ್ ಮಸೀದಿಯ ಮೌಲಾನಾ ಸದುದ್ದಿನ್ ಖಸ್ಮಿ, ಅಬ್ದುಲ್ ರಸೀದ್ ಅರಬ್, ಅಬ್ದುಲ್‍ರೆಹಮಾನ್ ಭಾಗವಾನ, ಇರ್ಫಾನ್ ಕೋತವಾಲ್, ಬಸವರಾಜ ತೇರದಾಳಮಠ, ಸಾಜೀದ್ ಇನಾಮದಾರ, ಮಹ್ಮದ್ ನಸೀರ್ ಸೇರಿದಂತೆ ಮತ್ತಿತರರು ಇದ್ದರು.

ಸುದ್ದಿ ಓದಿ