ತಾಳಿಕೋಟಿ

ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಉರುಳು ಸೇವೆ: ಮಾಜಿ ಸಚಿವ ನಾಡಗೌಡ ಟಿ ಬೆಂಬಲ

ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಉರುಳು ಸೇವೆ: ಮಾಜಿ ಸಚಿವ ನಾಡಗೌಡ ಟಿ ಬೆಂಬಲ

ತಾಳಿಕೋಟೆ 17: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣದ ಮಹಾರಾಣಾ ಪ್ರತಾಪ್ ವೃತ್ತದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಐದನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಸತ್ಯಾಗ್ರಹಕ್ಕೆ ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತನೊಬ್ಬ ಉರುಳು ಸೇವೆ ನಡೆಸಿ ಗಮನ ಸೆಳೆದಿದ್ದಾನೆ. 

ಪಟ್ಟಣದಿಂದ ಹಡಗಿನಾಳ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿಲಾಗುತ್ತಿರುವ ಮೇಲ್ಸೇತುವೆಯ ರಸ್ತೆ ಕಾಮಗಾರಿ ಅಂಕುಡೊಂಕಾಗಿಸದೇ ನೇರವಾಗಿ ನಿರ್ಮಿಸಬೇಕು. ಪುರಸಭೆಯಲ್ಲಿ ನಡೆದ ಅವ್ಯವಹಾರಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರದಿಂದ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಗಿತ್ತು. ಧರಣಿ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟರು ಸಹಿತ ಯಾವುದೇ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ನದಿಂ ಕಡು ಪಟ್ಟಣದ ಅಂಬಾಭವಾನಿ ದೇವಸ್ಥಾನದಿಂದ ಧರಣಿ ನಡೆಯುತ್ತಿರುವ ಸ್ಥಳದ ವರೆಗೆ ಉರುಳು ಸೇವೆ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು ಧರಣಿಗೆ ಬೆಂಬಲಿಸಿದ್ದಾನೆ. 

ಶುಕ್ರವಾರ ಸಂಜೆ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಭೇಟಿ ನೀಡಿ ಬೆಂಬಲವನ್ನು ಸೂಚಿಸಿದರು. ಧರಣಿ ನಿರತರ ಬೇಡಿಕೆಗಳು ಸೂಕ್ತವಾಗಿವೆ. ನನ್ನ ಅಧಿಕಾರವಧಿಯಲ್ಲಿ ಡೋಣಿ ನದಿ ಸೇತುವೆಯನ್ನು ಮಂಜೂರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸದ್ಯ ಸ್ಥಳದ ಬದಲಾವಣೆ ಮಾಡುತ್ತಿರುವದು ಸಮ್ಮತವಲ್ಲ. ತಾಲೂಕಿನಲ್ಲಿ ಬ್ರಷ್ಠಾಚಾರ ಮುಗಿಲು ಮುಟ್ಟಿದೆ. ಬ್ರಷ್ಠಾಚಾರದ ದಾಖಲೆಗಳನ್ನು ಇಟ್ಟುಕೊಂಡು ಧರಣಿ ನಿರತರ ಹೋರಾಟಕ್ಕೆ ನನ್ನ ಬೆಂಬಲವಿದೆ. ನಿಮ್ಮ ಹೋರಾಟದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಅವರ ಗಮನಕ್ಕೆ ತಂದು ಸದನದಲ್ಲಿ ಪ್ರಸ್ತಾಪಿಸಲು ಕೋರಲಾಗುವದು ಎಂದರು. ಹೋರಾಟಗಾರರ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ದೂರವಾಣಿಯಲ್ಲಿ ಮಾತನಾಡಿ, ಅಧಿಕಾರಿಗಳು ಮಾಡುತ್ತಿರುವ ಅಕ್ರಮದ ಕುರಿತು ದಾಖಲೆಗಳಿವೆ. ಈ ಕುರಿತು ಸೂಕ್ತ ಕ್ರಮ ಕೈಕೊಳ್ಳಲು ಕೋರಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ಉಪಾಧ್ಯಕ್ಷ ಸುಭಾಸ ಗೌಡಗೇರಿ, ಕಾರ್ಯದರ್ಶಿ ರವಿ ಕಟ್ಟಿಮನಿ, ಖಜಾಂಚಿ ಸುರೇಶ ಹಜೇರಿ, ಸುರೇಶ ಅಮರಸಿಂಗ ಹಜೇರಿ, ನದೀಂ ಕಡು, ಕೆಪಿಸಿಸಿ ಸದಸ್ಯ ಬಿ.ಎಸ್‌.ಪಾಟೀಲ ಯಾಳಗಿ, ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಜಿ.ಎಸ್‌.ಕಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಗುರು ತಾರನಾಳ, ಕೆ.ಎಚ್‌.ಪಾಟೀಲ. ಮಹಿಬೂಬ ಚೋರಗಸ್ತಿ, ಮಲ್ಲಿಕಾರ್ಜುನ ನಾಡಗೌಡ, ಕಾರ್ತಿಕ ಕಟ್ಟಿಮನಿ, ಪುರಸಭೆ ಮಾಜಿ ಅದ್ಯಕ್ಷೆ ನೀಲಮ್ಮಾ ಪಾಟೀಲ, ನ್ಯಾಯವಾದಿ ಎಂ.ಕೆ.ಕೆಂಬಾವಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ