ಶಿಗ್ಗಾವ್

ಸೊಲಬಕ್ಕನವರ ಶಿಲ್ಪಕಲಾಕೃತಿ ಅನಾವರಣ

ಸೊಲಬಕ್ಕನವರ ಶಿಲ್ಪಕಲಾಕೃತಿ ಅನಾವರಣ

ಲೋಕದರ್ಶನ ವರದಿ 


ಶಿಗ್ಗಾವಿ:  ತಾಲೂಕಿನ ಹುಲಸೋಗಿಯ ಸೊಲಬಕ್ಕನವರ ಶಿಲ್ಪಕಲಾ ಕುಟೀರಕ್ಕೀಗ 30 ವರ್ಷ ವಯಸ್ಸು. ಈಗ ಗೊಟಗೋಡಿಯಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಇದರ ಸ್ಥಾಪಕರು ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಡಾ.ಟಿ.ಬಿ.ಸೊಲಬಕ್ಕನವರ. ತನ್ನ ತಂದೆಯ ಕನಸಿನ ಕೂಸನ್ನು ಅಭಿವೃದ್ಧಿಪಥದತ್ತ ಅವರ ಮಗ ರಾಜ್‌ಹರ್ಷ ಕೊಂಡೊಯುತ್ತಿದ್ದಾರೆ. 

ಕೇವಲ 5 ಕಲಾವಿದರಿಂದ ಸ್ಥಾಪಿತವಾದ ಕುಟೀರ ಇಂದು 250 ಮಂದಿ ಕಲಾವಿದರನ್ನು ಹೊಂದಿದೆ.ರಾಜ್ಯ, ಹೊರರಾಜ್ಯ ಸೇರಿದಂತೆ 30 ಕ್ಕೂ ಶಿಲ್ಪಕಲಾ ಉದ್ಯಾನವನಗಳನ್ನು ನಿರ್ಮಿಸಿದೆ.  

ಪ್ರಸಕ್ತ ಬೈಲಹೊಂಗಲದ ಸಂಗೊಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ವೀರ ಸಂಗೊಳ್ಳಿ ರಾಯಣ್ಣ ಉದ್ಯಾನವನ ನಿರ್ಮಿಸುತ್ತಿದೆ. ಅನೇಕ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯಾನವನಗಳ ಕೆಲಸಗಳು ನಡೆಯುತ್ತಿವೆ. 

ಕಳೆದ ವರ್ಷ ನವೆಂಬರ್ 19 ರಂದು ಕುಟೀರದ ಸ್ಥಾಪಕ ಡಾ.ಟಿ.ಬಿ.ಸೊಲಬಕ್ಕನವರ ವಿಧಿವಶರಾಗಿದ್ದಾರೆ. ಈ ತಿಂಗಳು 19 ರಂದು ಬೆಳಗ್ಗೆ 9.30 ಗಂಟೆಗೆ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಅವರ ಶಿಲ್ಪಕಲಾಕೃತಿ ಅನಾವರಣ ಕಾರ್ಯಕ್ರಮವನ್ನು ಕುಟೀರ ಹಮ್ಮಿಕೊಂಡಿದೆ. 

ನಿವೃತ್ತ ಪ್ರಾಚಾರ್ಯ ಬ.ಫ.ಯಲಿಗಾರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರು ಸೊಲಬಕ್ಕನವರರ ಶಿಲ್ಪಕಲಾಕೃತಿ ಅನಾವರಣ ಗೊಳಿಸಲಿರುವರು. ದಿವಂಗತರ ಸ್ಮರಣಾರ್ಥ ಮಣ್ಣು ಶಿಲ್ಪ,ಪ್ರಾತ್ಯಕ್ಷೀಕೆಯನ್ನು ಬ್ಯಾಡಗಿಯ ಶಿಲ್ಪ ಕಲಾವಿದ ಹರೀಶ ಮಾಳಪ್ಪನವರ ನಡೆಸಿ ಕೊಡುವರು. ಕಲಾಯಾನ ಹಾಗೂ 'ನಾ ಕಂಡಂತೆ ಸೊಲಬಕ್ಕನವರ ಕುರಿತು ಗಣ್ಯರು ಮಾತನಾಡಲಿರುವರು. ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರಾದ ಫಕ್ಕಿರೇಶ ಕೊಂಡಾಯಿ,ಶಿಗ್ಗಾಂವ, ಕೊಟ್ರೇಶ ಮಾಸ್ತರ,ಬೆಳಗಲಿ ಹಾಗೂ ಕುಟೀರದ ಶಿಲ್ಪ ಕಲಾವಿದರಾದ ಗುರುಪಾದ ಹರಿಜನ ಮತ್ತು ಸಂಗಮೇಶ ನಿಗಧಿ ಅವರನ್ನು ಸನ್ಮಾನಿಸಲಾಗುವುದು. 


ಸುದ್ದಿ ಓದಿ