ಅನ್‌ಲಾಕ್ ಬೆನ್ನಲ್ಲೇ ಚಿಂತೆಯಿಲ್ಲದ ಸಂತೆ : 3ನೇ ಅಲೆಗೆ ಆಹ್ವಾನದಂತೆ
ಬನವಾಸಿ 24: ಸರಕಾರ ಮಾರುಕಟ್ಟೆಗೆ ಅನ್‌ಲಾಕ್ ಘೊಷಿಸಿದ್ದಷ್ಟೇ ತಡ ಬನವಾಸಿ ಪಟ್ಟಣದ ಬುಧವಾರದ ಸಂತೆ 56 ದಿನಗಳ ನಂತರ ಜನ ಸಂದಣಿಯಿಂದ ಕೂಡಿತ್ತು. ಅಂಗಡಿ ಮುಂಗಟ್ಟು ತೆರೆಯುವ, ಬಿಡಾರ ಹೂಡುವ, ತಳ್ಳು ಗಾಡಿಗೆ ಜಾಗ ಹುಡುಕುವ ತರಾತುರಿ ಜೋರಾಗಿತ್ತು.
ಜನ ಬಿಡುಗಡೆಯ ಭಾಗ್ಯಕ್ಕಾಗಿ ಕಾಯುತ್ತಿದ್ದರೇನೋ ಎಂಬಂತೆ ಬೆಳಗಿನಿಂದಲೇ ಜಮಾಯಿಸತೊಡಗಿದರು. ದಿಢೀರ್ ಜನಜಂಗುಳಿ ತಡೆಯಲು ಪೊಲೀಸ್ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸುರಕ್ಷತಾ ಮಾರ್ಗಸೂಚಿ ಹೇಳಿ ಕೆಲವೊಂದಕ್ಕೆ ಕಡಿವಾಣ ಹಾಕಿದರಾದರೂ ಜನ ಯಾವ ಚಿಂತೆಯಿಲ್ಲದೇ ಸಂತೆಯಲ್ಲಿ ಸಂಗಮಗೊಂಡರು. ಸುತ್ತಲಿನ ಹತ್ತಾರು ಹಳ್ಳಿಗಳ ರೈತರು ನಾನಾ ಸಾಮಗ್ರಿಗಳನ್ನು ಕೊಂಡು ಕೊಳ್ಳುವ ದೃಶ್ಯ ಗಮನ ಸೆಳೆಯುವುದರ ಜೊತೆಗೆ 3 ಅಲೆಗೆ ಆಹ್ವಾನ ನೀಡುತ್ತಿದ್ದಂತೆ ಭಾಸವಾಯಿತು.
ಸುತ್ತಮುತ್ತಲಿನ ಭಾಶಿ, ಅಜ್ಜರಣಿ, ಮೊಗವಳ್ಳಿ, ತಿಗಣಿ, ಮಧುರವಳ್ಳಿ, ಹಾಡಲಗಿ, ಬೆಂಗಳೆ, ಕಡಗೋಡು ಗ್ರಾಮಗಳಿಗೆ ಕೇಂದ್ರ ಬಿಂದುವಾದ ಬನವಾಸಿ ಸಂತೆ ಲಾಕ್‌ಡೌನ್ ಸಮಯದಲ್ಲಿ ಮಂಕಾಗಿದ್ದು ಬುಧವಾರ ಅನ್‌ಲಾಕ್‌ನಿಂದ ರಂಗೇರಿತ್ತು. ಸರಕಾರ ಅನ್‌ಲಾಕ್ ಮಾಡಿದೆ ಎಂಬ ಕಾರಣಕ್ಕಾಗಿ ಸಾರ್ವಜನಿಕರು ಎಚ್ಚರ ತಪ್ಪಿದರೆ ಇಷ್ಟು ದಿನದ ಲಾಕ್‌ಡೌನ್ ಉದ್ದೇಶ ವ್ಯರ್ಥವಾಗುತ್ತದೆ. ಅದು ಅಲ್ಲದೇ 3ನೇ ಅಲೆಗೆ ಆಹ್ವಾನ ನೀಡಿದಂತೆ ಭಾಸವಾಗುತ್ತಿದೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ. ಏನೇ ಇರಲಿ ಸಾರ್ವಜನಿಕರು ತಮ್ಮ ತಮ್ಮ ಆರೋಗ್ಯದ ಕಾಳಜಿವಹಿಸಿ ಕೋವಿಡ್ ಸುರಕ್ಷತೆಯನ್ನು ಅನುಸರಿಸುವುದು ಬಹಳ ಮುಖ್ಯ.