ಗೋಕಾಕ್

ಸಾರ್ವಜನಿಕರಿಗೆ ವಂಚಿಸುತ್ತಿದ್ದ ಅನಧಿಕೃತ ಆನ್‌ಲೈನ್ ಕೇಂದ್ರಗಳು ಬಂದ್

ಸಾರ್ವಜನಿಕರಿಗೆ ವಂಚಿಸುತ್ತಿದ್ದ ಅನಧಿಕೃತ ಆನ್‌ಲೈನ್ ಕೇಂದ್ರಗಳು ಬಂದ್

ಘಟಪ್ರಭಾ 24: ಅನಧಿಕೃತವಾಗಿ ಆನ್‌ಲೈನ್ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ 3 ಕೇಂದ್ರಗಳನ್ನು ಇಂದು ಘಟಪ್ರಭಾದಲ್ಲಿ ತಾಲೂಕ ದಂಡಾಧಿಕಾರಿಗಳು, ಪುರಸಭೆ ಅಧಿಕಾರಿಗಳು ಸೇರಿ  ಬಂದ್ ಮಾಡಿಸಿದರು. 

ಲವಕುಶ ಎನ್ನುವ ಮೂರು ಆನ್‌ಲೈನ್ ಕೇಂದ್ರಗಳು ಘಟಪ್ರಭಾದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಅವುಗಳು ಸರಕಾರದಿಂದ ಯಾವುದೆ ಅನುಮತಿ ಪಡೆಯದೆ ಅನಧಿಕೃತ ಕಾರ್ಯ ನಿರ್ವಹಿಸುತ್ತಾ ಆಧಾರ ಕಾರ್ಡ್‌ ತಿದ್ದುಪಡಿ, ಆಧಾರ ಹೊಸ ಅರ್ಜಿ, ಮತದಾರರ ಗುರುತಿನ ಚೀಟಿ ತಿದ್ದುಪಡಿ, ಮತದಾರರ ವಯಸ್ಸಿನ ತಿದ್ದುಪಡಿ, ಪಾನಕಾರ್ಡ್‌ ತಿದ್ದುಪಡಿ ಅಲ್ಲದೆ ಇನ್ನು ಹಲವಾರು ತಿದ್ದುಪಡಿಗಳನ್ನು ಮಾಡಿ ಸಾರ್ವಜನಿಕರಿಂದ ಮನಸ್ಸೋ ಇಚ್ಚೆ ಹಣ ವಸೂಲಿ ಮಾಡುತ್ತಿದ್ದು ಈ ಬಗ್ಗೆ  ದೂರು ನೀಡಿದ ಹಿನ್ನಲೆಯಲ್ಲಿ ತಾಲೂಕಾ ದಂಡಾಧಿಕಾರಿ ಡಾ. ಮೋಹನ ಭಸ್ಮೆ, ಕಂದಾಯ ನೀರಿಕ್ಷಕ ಎಸ್‌.ಐ ಹಿರೇಮಠ, ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಹಂಚಿನಾಳ, ಘಟಪ್ರಭಾ ಪುರಸಭೆ ಮುಖ್ಯಾಧಿಕಾರಿ ಎಮ್‌.ಎಸ್‌.ಪಾಟೀಲ, ಪುರಸಭೆ ಕಂದಾಯ ಅಧಿಕಾರಿ ಶ್ರೀಧರ ಪಾಟೀಲ ಹಾಗೂ  ಪೊಲೀಸ್ ಸಿಬ್ಬಂದಿ ಹಾಜರಿದ್ದರು. 

ಈ ಬಗ್ಗೆ ತಾಲೂಕಾ ದಂಡಾಧಿಕಾರಿ ಡಾ. ಮೋಹನ ಭಸ್ಮೆ ಹೇಳಿಕೆ ನೀಡಿದ್ದು ಘಟಪ್ರಭಾದಲ್ಲಿರುವ ಲವ-ಕುಶ ಆನ್‌ಲೈನ್ ಕೇಂದ್ರದವರು ಸರಕಾರದ ಯಾವುದೇ ಅನುಮತಿ ಇಲ್ಲದೆ ಆನ್‌ಲೈನ್ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಂದ ತುಂಬಾ ಹಣವನ್ನು ತೆಗೆದುಕೊಂಡು ವಂಚಿಸುತ್ತಿರುವ ಬಗ್ಗೆ ದೂರವಾಣಿ ಹಾಗೂ ಲಿಖಿತ ಸಾರ್ವಜನಿಕರ ಅರ್ಜಿ ಬಂದಿರುವ ಹಿನ್ನಲೆಯಲ್ಲಿ ದಾಳಿ ಮಾಡಿ ಆ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಇನ್ನು ಮುಂದೆಯೂ ಯಾವುದೆ ಅಧಿಕೃತ ಆನ್‌ಲೈನ್ ಕೇಂದ್ರದವರು 50 ರೂಕ್ಕಿಂತ ಹೆಚ್ಚಿಗೆ ಆಧಾರ ಕಾರ್ಡ್‌ ತಿದ್ದುಪಡಿಗೆ ತೆಗೆದುಕೊಂಡರೆ ನೇರವಾಗಿ ನನಗೆ ಸಂಪರ್ಕಿಸಿ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. 

ಆನ್‌ಲೈನ್ ಕೇಂದ್ರದ ಮಾಲಿಕ ರಾಘವೇಂದ್ರ ಕುಡ್ಮೆಮಿ ಹೇಳಿಕೆ ನೀಡಿ ಸಿಎಸ್‌ಸಿ ಸರ್ವಿಸ್ ಕೇಂದ್ರದ ಅನುಮತಿ ನಾವು ಪಡೆದುಕೊಂಡು ಕೆಲಸ ಮಾಡುತ್ತಿದ್ದು ಉಳಿದ ಕೇಂದ್ರಕ್ಕೂ ನಮಗೂ ಸಂಬಂಧವಿಲ್ಲ ಆದರೂ ಅಧಿಕಾರಿಗಳು ಸರಿಯಾದ ಕಾರಣವಿಲ್ಲದೆ ದಾಳಿ ಮಾಡಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆಂದು ಹೇಳಿದರು. 


ಸುದ್ದಿ ಓದಿ