ವಾಹನದಾರರನ್ನು ‘ನಿರಾಳ’ ಗೊಳಿಸಿದ ಕೇಂದ್ರ ಸರ್ಕಾರ
ನವದೆಹಲಿ, ಡಿ 27: ವಾಹನದಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ನಿರಾಳವಾಗುವಂತಹ ಸುದ್ದಿ ನೀಡಿದೆ. ಕೋವಿಡ್ ಕಾಟದಿಂದಾಗಿ ಚಾಲನಾ ಪರವಾನಗಿ, ಪರ್ಮಿಟ್ ಅವಧಿ ಮುಗಿದು ನವೀಕರಣಗೊಳಿಸಲಾಗದೆ ಪರಿತಪಿಸುತ್ತಿದ್ದವರಿಗೆ ಮತ್ತೊಮ್ಮೆ ಮಾನ್ಯತೆ ಅವಧಿಯನ್ನು ಕೇಂದ್ರ ಸರ್ಕಾರ 2021ರ ಮಾರ್ಚ್ 31ರ ವರೆಗೆ ಭಾನುವಾರ ವಿಸ್ತರಿಸಿದೆ.ಈ ಕುರಿತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಿದೆ. ಫಿಟ್ ನೆಸ್, ಪರ್ಮಿಟ್ (ಎಲ್ಲ ರೀತಿಯ) ಚಾಲನಾ ಪರವಾನಗಿ, ನೋಂದಣಿ ಅವಧಿ ಮುಗಿದಿದ್ದು ಲಾಕ್ ಡೌನ್ ಕಾರಣದಿಂದ ನವೀಕರಣ ಮಾಡಿಸಿಕೊಳ್ಳದಿದ್ದರೂ ಅವುಗಳ ಮಾನ್ಯತೆಯನ್ನು ನಾಲ್ಕನೇ ಬಾರಿ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.
ಇದರಿಂದ ಸಾರ್ವಜನಿಕರು ಸಾರಿಗೆ ಸಂಬಂಧಿತ ಸೇವೆಗಳನ್ನ ಪಡೆಯಲು ಅನುವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಈ ದಾಖಲೆಗಳ ಸಿಂಧುತ್ವವನ್ನು ಸರ್ಕಾರ ವಿಸ್ತರಿಸಿರುವುದು ಇದು ನಾಲ್ಕನೇ ಬಾರಿ. ಈ ದಾಖಲೆಗಳು ಡಿಸೆಂಬರ್ 31ರವರೆಗೆ ಸಿಂಧುವಾಗಿರುತ್ತದೆ ಎಂದು ಆಗಸ್ಟ್ʼನಲ್ಲಿ ಸರ್ಕಾರ ಹೇಳಿತ್ತು.ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಸೂಚನೆಯನ್ನು ಚಾಚೂ ತಪ್ಪದೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.