ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಗೆ ವಿದ್ಯುತ್ ಕಂಬ, ಮರಗಳು ಧರೆಗೆ
ಹೆಸ್ಕಾಂಗೆ 20 ಲಕ್ಷಕ್ಕೂ ಅಧಿಕ ರೂ. ನಷ್ಟ
ರಾಣೇಬೆನ್ನೂರು 09: ಇತ್ತೀಚೆಗೆ ಸುರಿದ ಭಾರೀ ಬಿರುಗಾಳಿ ಮತ್ತು ಅತಿಯಾದ ಗುಡುಗು ಸಹಿತ ಮಳೆಯಿಂದಾಗಿ ನಗರ ಮತ್ತು ತಾಲೂಕಿನ ಜನತೆ ತತ್ತರಿಸುವಂತಾಗಿದೆ. ಶನಿವಾರ ತಡ ರಾತ್ರಿ ಬೀಸಿದ ಭಾರೀ ಬಿರುಗಾಳಿ ಹಾಗೂ ಮಳೆಯಿಂದ ನಗರದ ಬಹುತೇಕ ಭಾಗಗಳಲ್ಲಿ ದೈತ್ಯಾಕಾರದ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಇಡೀ ರಾತ್ರಿ ವಿದ್ಯುತ್ ಇಲ್ಲದೆ ಜನರು ತತ್ತರಿಸುವಂತಾಗಿತ್ತು.
ಕೆಲ ಭಾಗಗಳಲ್ಲಿ ರಸ್ತೆಗೆ ಉರುಳಿ ಬಿದ್ದ ಮರ ಹಾಗೂ ವಿದ್ಯುತ್ ಕಂಬಗಳಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು. ಕೆಲ ಓಣಿಗಳಲ್ಲಿ ರವಿವಾರವೂ ಸಹ ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗಿತ್ತು. ಹೆಸ್ಕಾಂ ಮತ್ತು ನಗರಸಭಾ ಕಾರ್ಮಿಕರು ಮರ ಗಿಡಗಳನ್ನು ತೆರವು ಮಾಡಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಎಲ್ಲಿಯೂ ಸಹ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿನ ದೇವರಗುಡ್ಡ ರಸ್ತೆಯ ರೈಲ್ವೆ ಸೇತುವೆ ಕೆಳಗಿನ ಭಾಗದಲ್ಲಿ ಆಳೇತ್ತರದ ನೀರು ತುಂಬಿ ಜನರ ಮತ್ತು ವಾಹನ ಸಂಚಾರ ಸ್ಥಗಿತಗೊಂಡಿದ್ದು ಕಂಡು ಬಂದಿತು.
ತಾಲೂಕಿನಲ್ಲಿ ಬೀಸಿದ ಭಾರೀ ಗಾಳಿಗೆ ವಿವಿಧೆಡೆ 50ಕ್ಕೂ ಅಧಿಕ ದೊಡ್ಡ ದೊಡ್ಡ ಮರಗಳು ಕೆಇಬಿಗೆ ಸಂಬಂಧಿಸಿದ ಅಂದಾಜು 90ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, 3 ಟ್ರಾನ್ಸಫಾರ್ಮರ್ ಹಾಳಾಗಿದ್ದರಿಂದ ಹೆಸ್ಕಾಂಗೆ 20 ಲಕ್ಷ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.
ರಾಣೇಬೆನ್ನೂರ-1 ಉಪವಿಭಾಗದ ಎರೆಕುಪ್ಪಿಯಲ್ಲಿ-10, ಹುಲ್ಲತ್ತಿ-01, ಹರನಗಿರಿ ಕುದರಿಹಾಳ-55 ಮತ್ತು ರಾಣೇಬೆನ್ನೂರ ಶಹರದಲ್ಲಿ 20 ಕಂಬಗಳು ಹಾಗೂ ರಾಣೇಬೆನ್ನೂರ ಶಹರದಲ್ಲಿ 2 ಟಿ.ಸಿ ಕೇಂದ್ರಗಳು ಹಾಗೂ ಹರನಗಿರಿ ಯಲ್ಲಿ 1 ಟಿ.ಸಿ ಕೇಂದ್ರ ಬಿದ್ದಿರುತ್ತದೆ. ಅದರಂತೆ ರಾಣೇಬೆನ್ನೂರ-2 ಉಪವಿಭಾಗದ ಬೇಲೂರು, ಮೆಡ್ಲೇರಿ,ಅಂಕ್ಸಾಪುರ ಹೀಲದಹಳ್ಳಿ ಯಲ್ಲಿ 70 ಕಂಬಗಳು.