ಸಾರಿಗೆ ಮುಷ್ಕರ ನಿಷೇಧ ದಮನಕಾರಿ : ಸಿಪಿಐ(ಎಂ)
ಕಾರವಾರ 10: ಏಪ್ರಿಲ್ 7 ರಿಂದ ನಡೆದಿರುವ ಸಾರಿಗೆ ನೌಕರರ ಮುಷ್ಕರವನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವ ಬದಲು ನಿಷೇಧ ಮಾಡಿರುವುದು ರಾಜ್ಯ ಬಿಜೆಪಿ ಸರ್ಕಾರದ ದಮನಕಾರಿ ಕ್ರಮವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್ರ್ವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಕಾನೂನು ರೀತಿ ಮುಷ್ಕರ ನೋಟಿಸ್ ನೀಡಿ ಮುಷ್ಕರವನ್ನು ನೌಕರರು ನಡೆಸಿದ್ದಾರೆ. ಏಪ್ರಿಲ್ 7 ರಿಂದ ಆರಂಭವಾಗಿರುವ ಮುಷ್ಕರವನ್ನು 6 ರಿಂದಲೆ ಆರಂಭಿಸಲಾಗಿದೆ ಎಂದು ಕಾರ್ಮಿಕ ಆಯುಕ್ತರ ಮೂಲಕ ತಪ್ಪು ವರದಿ ಪಡೆದು ಸರ್ಕಾರವು ವಿವಾದವನ್ನು ನ್ಯಾಯ ನಿರ್ಣಯಕ್ಕೆ ಶಿಫಾರಸ್ಸು ಮಾಡಿ ಮುಷ್ಕರ ನಿಷೇಧಿಸಿರುವುದಾಗಿ ಪ್ರಕಟಿಸಿದೆ. ಇದು ಸರಿಯಾದ ಕ್ರಮವಲ್ಲ. ಇದು ಸರ್ವಾಧಿಕಾರಿ ಧೋರಣೆ ಎಂದು ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ಶಾಂತಾರಾಂ ನಾಯ್ಕ ಹೇಳಿದ್ದಾರೆ.
ಸಾರ್ವಜನಿಕ ಉಪಯುಕ್ತ ಸೇವೆಯ ನೌಕರರು ಮುಷ್ಕರ ನೋಟಿಸ್ ಸಲ್ಲಿಸಿದ ಕೂಡಲೆ ರಾಜಿ ಸಂಧಾನ ಸಭೆ ನಡೆಸಬೇಕಿತ್ತು. ಮಾತುಕತೆ ಮೂಲಕ ಸೌಹಾರ್ದ ಪರಿಹಾರಕ್ಕೆ ಇರುವ ಸಾಧ್ಯತೆಗಳನ್ನು ಕಂಡುಹಿಡಿಯುವ ಬದಲು ಸಾರಿಗೆ ನೌಕರರ ವಸತಿ ಗೃಹ ತೆರವು, ಟ್ರೈನಿಗಳ ವಜಾ, ಖಾಸಗಿ ಬಸ್ಗಳ ಓಡಾಟಕ್ಕೆ ಕ್ರಮದಂತಹ ಹೊಣೆಗೇಡಿ ಕ್ರಮಕ್ಕೆ ಮುಂದಾಗಿ, ಎಸ್ಮಾ ಜಾರಿ ಬೆದರಿಕೆ ಒಡ್ಡಲಾಯಿತು. ಅವುಗಳು ಫಲಿಸದಿದ್ದಾಗ ಇದೀಗ ಮುಷ್ಕರ ನಿಷೇಧಿಸಿ ರಾಜ್ಯ ಬಿಜೆಪಿ ಸರ್ಕಾರವು ಆದೇಶಿಸಿದೆ. ಇಂತಹ ಹಲವು ದಮನಕಾರಿ ನಿಷೇಧಗಳನ್ನು ರಾಜ್ಯದ ಕಾರ್ಮಿಕ ವರ್ಗವು ಹಿಮ್ಮೆಟ್ಟಿಸಿದೆ ಎಂಬುದನ್ನು ರಾಜ್ಯ ಬಿಜೆಪಿ ಸರ್ಕಾರವು ಅರಿಯಬೇಕಿದೆ.
ಮುಷ್ಕರ ನಿಷೇಧ ದಮನಕಾರಿ : ದಮನಕಾರಿ ಕ್ರಮಗಳಿಂದ ಮುಷ್ಕರದ ಹಕ್ಕನ್ನು ದಮನಿಸಲು ಸಾಧ್ಯವಿಲ್ಲ ಎಂದಿದೆ ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಲು ಕ್ರಮವಹಿಸದೆ ಉಪಚುನಾವಣೆಯಲ್ಲಿ ಮುಳುಗಿರುವ ರಾಜ್ಯದ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ಇತರೆ ಸಚಿವರು ಜನತೆಗೆ ಪರದಾಡುವ ಭಾಗ್ಯ ಕಲ್ಪಿಸಿ ಮೊದಲಿಗೆ 4 ಶೇಕಡ, ನಂತರ 6, ಆನಂತರ 10 ಶೇಕಡ ವೇತನ ಹೆಚ್ಚಳದ ಏಕಪಕ್ಷೀಯ ಹೇಳಿಕೆ ನೀಡಿ ಮುಷ್ಕರ ನಿರತರನ್ನು ಕಳನಾಯಕರಂತೆ ಬಿಂಬಿಸುವ ಯತ್ನ ನಡೆಸಿ, ಅದಕ್ಕೆ ರಾಜಕೀಯ ಬಣ್ಣ ಬಳಿಯುವ ವಿಫಲ ಯತ್ನದ ಹೊಣೆಗೇಡಿತನವನ್ನು ರಾಜ್ಯ ಬಿಜೆಪಿ ಸರ್ಕಾರವು ಪ್ರದರ್ಶಿಸಿದೆ ಎಂದು ಸಿಪಿಐ(ಎಂ) ಖಂಡಿಸಿದೆ. ಬಿಜೆಪಿ ಸರ್ಕಾರವು ಮುಷ್ಕರ ನಿಷೇಧದ ಮೂಲಕ ತನ್ನ ದಮನಕಾರಿ ದುರಾಡಳಿತವನ್ನು ತೋರಿದೆ, ಸರಕಾರ ಕೂಡಲೇ ನಿಷೇದಾಜ್ಞೆ ಹಿಂಪಡೆಯಬೇಕೆಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಂತಾರಾಮ ನಾಯಕ ಒತ್ತಾಯಿಸಿದ್ದಾರೆ.....