ವಿಬಿಗ್ರಾಮ್-ಜಿ ಯೋಜನೆ ಕುರಿತು ತರಬೇತಿ ಕಾರ್ಯಾಗಾರ
ಬ್ಯಾಡಗಿ, ಜು. 5: ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ವಿಬಿಗ್ರಾಮ್-ಜಿ ಯೋಜನೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಉದ್ಯೋಗ ಖಾತರಿ ಯೋಜನೆಯ ಮಾದರಿಯಲ್ಲೇ ಈ ಯೋಜನೆ ಜಾರಿಯಲ್ಲಿದ್ದು, ಜಾಬ್ ಕಾರ್ಡ್ ಬದಲಿಗೆ ಗ್ಯಾರಂಟಿ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಅನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಿಸಬೇಕು. ವಿಶೇಷಚೇತನರು ಹಾಗೂ ತೃತೀಯ ಲಿಂಗದವರಿಗೆ ವಿಶೇಷ ಗ್ಯಾರಂಟಿ ಕಾರ್ಡ್ ನೀಡುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಕೂಲಿಕಾರರಿಗೆ ಉದ್ಯೋಗ ಖಾತರಿಯ ಜೊತೆಗೆ ಅಭಿವೃದ್ಧಿಗೆ ಉತ್ತೇಜನ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದ ಅವರು, ಯೋಜನೆಯಡಿ ಇರುವ ವಿವಿಧ ನಿಯಮಗಳು ಹಾಗೂ 1 ರಿಂದ 37ರ ತನಕದ ಕಾಯ್ದೆಗಳ ಕುರಿತು ವಿವರಿಸಿದರು. ಸಂಪನ್ಮೂಲ ವ್ಯಕ್ತಿ ನಾಗರಾಜ ಹಡಗಲಿ ಯೋಜನೆಯ ವಿವರ, ಅನುಷ್ಠಾನ ಕ್ರಮ, ಮಾರ್ಗಸೂಚಿಗಳು ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಸಹಾಯಕ ನಿರ್ದೇಶಕ ಎಂ.ಜೆ. ಅಗಸರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ತಾಂತ್ರಿಕ ಸಂಯೋಜಕ ಸಂತೋಷ್ ನಾಯ್ಕ, ಎಂಐಎಸ್ ಸಂಯೋಜಕಿ ಸಿದ್ದಲಿಂಗಮ್ಮ ಸಿರಿಗೇರಿ, ಐಇಸಿ ಸಂಯೋಜಕ ಅಕ್ಷಯ್ ದೇಶಪಾಂಡೆ, ಆಡಳಿತ ಸಹಾಯಕ ಪ್ರತಿಭಾ, ಗ್ರಾಮ ಪಂಚಾಯಿತಿ ಸಿಬ್ಬಂದಿ, ತಾಂತ್ರಿಕ ಸಹಾಯಕರು ಹಾಗೂ ಬಿಎಫ್ಟಿ ಸಿಬ್ಬಂದಿ ಉಪಸ್ಥಿತರಿದ್ದರು.