ನೀರು, ಮಣ್ಣು ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಮಂಜುನಾಥ ಬಿ.
ರಾಣಿಬೆನ್ನೂರ 31: ಮಣ್ಣು ಮತ್ತು ನೀರು ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳು. ಇವು ದೇಶದ ಆರ್ಥಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಮಹತ್ತರ ಪ್ರಭಾವವನ್ನು ಬೀರುತ್ತವೆ. ಈ ನೀರು ಮತ್ತು ಮಣ್ಣು ಸಂರಕ್ಷಣೆಯಲ್ಲಿ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬಿ. ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಾವೇರಿ ಕೃಷಿ ಇಲಾಖೆ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಆಶ್ರಯದಲ್ಲಿ 75 ನೇಯ ಸ್ವತಂತ್ರ ವರ್ಷಾಚರಣೆಯ ಅಂಗವಾಗಿ ಏರ್ಪಡಿಸಿದ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನೀರು ಮತ್ತು ಮಣ್ಣು ಸಂರಕ್ಷಣೆ ಮಾಡದಿದ್ದರೆ ಈ ಭೂಮಿ ಮೇಲಿನ ಜೀವರಾಶಿಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ನಾವುಗಳು ಈ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡಲೇಬೇಕು. ಇದಕ್ಕೊಸ್ಕರ ನಮ್ಮ ಇಲಾಖೆಯಿಂದ ವಿವಿಧ ಯೋಜನೆಗಳು ಇದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯುವುದಲ್ಲದೆ ನಮ್ಮ ಮಣ್ಣು ಮತ್ತು ನೀರು ನಮ್ಮ ಹೊಲಗಳಲ್ಲಿಯೇ ಉಳಿಸಿಕೊಳ್ಳಲು ಸಾಧ್ಯ ಎಂದರು.
ಪ್ರಗತಿ ಪರ ರೈತರು ಹಾಗೂ ಜಲ ತಜ್ಞ ಚನ್ನಬಸಪ್ಪ ಕೋಂಬಳಿ ಮಾತನಾಡಿ, ನೀರು ಮತ್ತು ಮಣ್ಣಿನ ಸಂರಕ್ಷಣೆಯ ಬಗ್ಗೆ ರೈತರು ಹೆಚ್ಚಿನ ಆಧ್ಯತೆ ನೀಡಬೇಕು. ಜೊತೆಗೆ ಅಂತರಜಲದ ಮರುಪೂರ್ಣ ಮಾಡುವುದರ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಮಂಜುನಾಥ ಎಮ್. ವಿ, ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಆರ್ ಬಸವರಾಜಪ್ಪ, ವನಸಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಸಿಓ ಎಸ್. ಡಿ. ಬಳಿಗಾರ, ಹಿರಿಯ ವಿಜ್ಞಾನಿ ಡಾ. ಅಶೋಕ ಪಿ, ಡಾ. ಶಿವಮೂರ್ತಿ ಡಿ, ಡಾ. ರಾಜಕುಮಾರ ಜಿ. ಆರ್ ರೈತರಿಗೆ ತರಬೇತಿ ನೀಡಿದರು, ತರಬೇತಿಯಲ್ಲಿ ಸುಮಾರು 75 ರೈತರು ಮತ್ತು ರೈತ ಮಹಿಳೆಯರು ಪಾಲ್ಗೊಂಡಿದ್ದರು.