ಟ್ರ್ಯಾಕ್ಟರನ ಬ್ಯಾಟರಿ ಕಳ್ಳತನ: ಆರೋಪಿಗಳ ಬಂಧನಕ್ಕೆ ಪೊಲೀಸ್ ಜಾಲ
ಬೈಲಹೊಂಗಲ 23: ತಾಲೂಕಿನ ದೊಡವಾಡ ಹಾಗೂ ಯಡಹಳ್ಳಿ, ಕೆಂಚರಾಮನಹಾಳ, ಸಂಗ್ರೇಶಕೊಪ್ಪ, ಇನಾಮಹೊಂಗಲ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಟ್ರ್ಯಾಕ್ಟರಿನಲ್ಲಿರುವ ಬೆಲೆ ಬಾಳುವ ಬ್ಯಾಟರಿಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡುತ್ತಿರುವುದು ಹಳ್ಳಿಗಳ ರೈತರಿಗೆ ತಲೆ ನೋವಾಗಿದೆ. ತಮ್ಮ ದೈನಂದಿನ ಕೆಲಸ ಮುಗಿದ ಬಳಿಕ ರೈತರು ತಮ್ಮ ಶೆಡ್ಡು ಹಾಗು ಮನೆಗಳ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗಳಿಗೆ ಕಣ್ಣ ಹಾಕುತ್ತಿರುವ ಕಳ್ಳರು ತಡ ರಾತ್ರಿ ವೇಳೆ ಯಾರ ಕಣ್ಣಿಗೂ ಬೀಳದಂತೆ ಸ್ವಲ್ಪವೂ ಸದ್ದಾಗದಂತೆ ಬೈ ನೆಟ್ ತೆರೆದು ಟ್ರ್ಯಾಕ್ಟರ್ ಬ್ಯಾಟರಿ ಬಿಚ್ಚಿಕೊಂಡು ಪರಾರಿಯಾಗುತ್ತಿದ್ದಾರೆ.
ಭಾನುವಾರ ರಾತ್ರಿ ಯಡಹಳ್ಳಿ ಸಂಗ್ರೆಶಕೊಪ್ಪ ಗ್ರಾಮಗಳಲ್ಲಿ ಸುಮಾರು ಹತ್ತು ಬ್ಯಾಟರಿಗಳು ಕಳುವಾಗಿವೆ ಎನ್ನಲಾಗಿದೆ. ಮಂಗಳವಾರ ರಾತ್ರಿ ದೊಡವಾಡ ಗ್ರಾಮದ ಹಣಮಂತ ಸಪ್ಪಡ್ಲಿ ಹಾಗೂ ಬಸನಗೌಡ ಪಾಟೀಲ ಎಂಬುವರ ಟ್ರ್ಯಾಕ್ಟರ್‌ಗಳ ಬ್ಯಾಟರಿಗಳನ್ನು ಬಿಚ್ಚಿ ಹೊತ್ತೊಯ್ದಿದ್ದಾರೆ.
ಸುದ್ದಿ ತಿಳಿದ ದೊಡವಾಡ ಪೋಲೀಸ್ ಠಾಣೆ ಪಿಎಸ್‌ಐ ಗಜಾನನ ನಾಯಕ ಬ್ಯಾಟರಿ ಕಳ್ಳತನವಾದ ಸ್ಥಳಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಕಳ್ಳತನ ನಡೆದ ಸ್ಥಳಕ್ಕೆ ಹತ್ತಿರದಲ್ಲಿರುವ ಕೆವಿಜಿ ಬ್ಯಾಂಕನಲ್ಲಿನ ಸಿಸಿ ಟಿವಿ ದೃಶ್ಯಾವಳಿ ವೀಕ್ಷಿಸಿದರು. ಬ್ಯಾಟರಿ ಕಳ್ಳತನದ ಹಿಂದೆ ದೊಡ್ಡ ಜಾಲವೇ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅವರು ಸವದತ್ತಿ ಪೋಲೀಸ್ ಠಾಣೆ ಪಿಎಸ್‌ಐರವರಿಂದಲೂ ಕೂಡ ಘಟನೆ ಬಗ್ಗೆ ವಿವರ ಪಡೆದು ಪ್ರಕರಣ ದಾಖಲಿಸಿಕೊಂಡು ಶೀಘ್ರವೇ ಬ್ಯಾಟರಿ ಕಳ್ಳರನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.