ಸೌದಿ ಅರೇಬಿಯಾದ ದಕ್ಷಿಣ ಭಾಗದ ವಿಮಾನ ನಿಲ್ದಾಣಗಳ ಮೇಲೆ ದಾಳಿ; ಮೂವರಿಗೆ ಗಾಯ
ರಿಯಾದ್, ಅ. 6: ಸೌದಿ ಅರೇಬಿಯಾದ ದಕ್ಷಿಣ ಭಾಗದಲ್ಲಿರುವ ಎರಡು ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಸೋಮವಾರ ನಡೆದ ದಾಳಿಯಲ್ಲಿ ಮೂವರು ಗಾಯಗೊಂಡಿದ್ದು, ವಿಮಾನ ನಿಲ್ದಾಣಗಳ ಸೌಲಭ್ಯಗಳಿಗೆ ಹಾನಿಯಾಗಿದೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಸಾಮಾನ್ಯ ಪ್ರಾಧಿಕಾರ (GACA) ಮಂಗಳವಾರ ತಿಳಿಸಿದೆ.
ಜಝಾನ್‌ನ ಕಿಂಗ್ ಅಬ್ದುಲ್ಲಾ ಬಿನ್ ಅಬ್ದುಲಅಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಜ್ರಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸೌಲಭ್ಯಗಳನ್ನು ದಾಳಿಕೋರರು ಗುರಿಯಾಗಿಸಿಕೊಂಡಿದ್ದರು ಎಂದು GACA ತಿಳಿಸಿದೆ. ತುರ್ತು ಪ್ರತಿಕ್ರಿಯಾ ತಂಡಗಳು ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ, ನಿಗದಿತ ಕಾರ್ಯವಿಧಾನಗಳಂತೆ ಕ್ರಮ ಕೈಗೊಂಡರು.
ದಾಳಿಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ದಾಳಿಯಿಂದ ವಿಮಾನ ನಿಲ್ದಾಣದ ಕೆಲವು ಸೌಲಭ್ಯಗಳಿಗೂ ಹಾನಿಯಾಗಿದೆ.
ಪ್ರಯಾಣಿಕರು, ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ದೇಶದ ನಾಗರಿಕ ವಿಮಾನಯಾನ ಮೂಲಸೌಕರ್ಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಹಾನಿಯ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು GACA ತಿಳಿಸಿದೆ.
ದಾಳಿಗೆ ಯಾರು ಹೊಣೆ ಎಂಬುದನ್ನು GACA ಸ್ಪಷ್ಟಪಡಿಸಿಲ್ಲ.
ಆದರೆ, ಯೆಮನ್‌ನ ಹೌತಿ ಬಂಡುಕೋರ ಗುಂಪು ಸೋಮವಾರ ಸೌದಿ ಅರೇಬಿಯಾದ ವಿವಿಧ ಪ್ರದೇಶಗಳಲ್ಲಿನ ಗುರಿಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಸರಣಿಯನ್ನು ನಡೆಸಿರುವುದಾಗಿ ಹೇಳಿಕೊಂಡಿದೆ. ಜಝಾನ್ ಮತ್ತು ನಜ್ರಾನ್‌ನಲ್ಲಿರುವ ತಾನು ‘ಸೂಕ್ಷ್ಮ ತಾಣಗಳು’ ಎಂದು ಕರೆಯುವ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೌತಿಗಳು ಹೇಳಿವೆ.
ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಬ್ಹಾ ವಿಮಾನ ನಿಲ್ದಾಣ, ರಬಿಘ್‌ನಲ್ಲಿರುವ ಅರಾಮ್ಕೊ ತೈಲ ಸಂಸ್ಕರಣಾ ಘಟಕ ಹಾಗೂ ಹಲವು ಸೇನಾ ನೆಲೆಗಳ ಮೇಲೂ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿವೆ.
ನಾಗರಿಕ ಮತ್ತು ಆರ್ಥಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿದ್ದು, ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸುವ ಉದ್ದೇಶದಿಂದ ಹೌತಿಗಳು ಇಂತಹ ದಾಳಿಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದೆ.