ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ: ಶಾಸಕ ಸೋಮನಗೌಡ
ತಾಳಿಕೋಟಿ/ಹುಣಶ್ಯಾಳ: ದೇ.ಹಿಪ್ಪರಗಿ ಮತಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಸಮಸ್ಯೆವಿದೆ. ಈ ಭಾಗದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸುವದರ ಮೂಲಕ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದುದೇ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು.
ಮತಕ್ಷೇತ್ರದ ಹುಣಶ್ಯಾಳ ಕೆರೆದಡದಲ್ಲಿ ಕೃಷ್ಣ ಭಾಗ್ಯ ಜಲನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡ ಮುಳವಾಡ ಏತ ನೀರಾವರಿ ಯೋಜನೆ ವಿಜಯಪುರ ಮುಖ್ಯ ಕಾಲುವೆಯ ಸರಪಳಿ ಕಿ.ಮಿ. 169.760 ರಿಂದ ಹುಣಶ್ಯಾಳ ಕೆರೆ ತುಂಬುವ ರೂ.5 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ನೀಡಿದ ವಾಗ್ದಾನದಂತೆ ನಾನು ಕ್ಷೇತ್ರದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಹಾಕಿಕೊಂಡು ಕಾರ್ಯನಿರತನಾಗಿದ್ದೇನೆ. ಇದರಿಂದ ಅಂತರ್ಜಲ ಹೆಚ್ಚಾಗಿ ಕುಡಿಯುವ ನೀರಿನ ಗಂಭೀರ ಸಮಸ್ಯೆಗೆ ಪರಿಹಾರ ಸಿಗಲಿದೆ ಹುಣಶ್ಯಾಳ ಕೆರೆಯ ವ್ಯಾಪ್ತಿಯ ಸುಮಾರು 8-10 ಗ್ರಾಮಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ, ಅಭಿವೃದ್ಧಿಯ ಈ ಎಲ್ಲ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರ ನನಗೆ ಸಿಗಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ.ಪಂ. ಸದಸ್ಯ ರಮೇಶ ಮಸಿಬಿನಾಳ ಹಿಂದಿನ ಶಾಸಕರ 10 ವರ್ಷಗಳ ಅವಧಿಯಲ್ಲಿ ಈ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿತ್ತು, ಶಾಸಕ ಸೋಮನಗೌಡರು ಬಂದನಂತರ ಇಂದು ಕ್ಷೇತ್ರದ್ಯಾಂತ ಕಾಮಗಾರಿಗಳು ನಡೆಯುತ್ತಿವೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಅವರ ಗುರಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಹಾಗೂ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ ಸಮಯೋಚಿತವಾಗಿ ಮಾತನಾಡಿದರು.
ಪ.ಪೂ. ಮಡಿವಾಳೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಾಸಕ ಸಹೋದರ ಸಾಹೇಬಗೌಡ ಪಾಟೀಲ(ಸಾಸನೂರ), ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಶಿದರಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಗಾಯತ್ರಿದೇವೂರ, ಗ್ರಾ.ಪಂ. ಅಧ್ಯೆಕ್ಷೆ ಬಂಗಾರವ್ವ ದೊಡಮನಿ, ಸಂಗನಗೌಡ ಹೆಗರಡ್ಡಿ, ಅಹ್ಮದಸಾಹೇಬ ಮೋಮಿನ, ಡಿ.ಎಚ್.ಸಿಪಾಯಿ, ಅಪ್ಪಾಸಾಹೇಬ ದೇವರಗುಡಿ, ಮೌನೇಶ ಪೂಜಾರಿ, ಶಂಕ್ರ್ಪ ಬಂಗಾರಗುಂಡ, ದಸ್ತಗೀರ ಬಡೇಘರ, ಕೆಬಿಜೆಎನ್ಎಲ್ ಎಇ, ವಿರೇಶ, ಎಇಇ ವಿ.ಎಲ್.ಶೇಗುಣಸಿ, ಎಇ, ಎಸ್.ಬಿ.ಸೂಳೆಭಾವಿ, ಸೂರ್ಯಕನ್ಸಟ್ರೆಕ್ಷನ್ ಮುಖ್ಯಸ್ಥ ಪವನ್ಎಸ್.ಡಿ. ಮತ್ತಿತರರು ಉಪಸ್ಥಿತರಿದ್ದರು.