ಹೂಟಿಗೆ ಕೊಟ್ಟ ಜವಾಬ್ದಾರಿಗೆ ನ್ಯಾಯ ಒದಗಿಸುವ ಗಟ್ಟಿತನವಿದೆ: ಹಂಗರಕಿ
ಲೋಕದರ್ಶನ ವರದಿ
ಬೈಲಹೊಂಗಲ 01: ನಾಡಿಗೆ ಹಿರಿಯ ಪತ್ರಕರ್ತ, ಶಿಕ್ಷಣ ತಜ್ಞ ಈಶ್ವರ ಹೂಟಿ ಅವರ ಕೊಡುಗೆ ಅಪಾರವಾಗಿದ್ದು, ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಜತೆಗೆ ಅದಕ್ಕೆ ನ್ಯಾಯ ಒದಗಿಸುವ ಗಟ್ಟಿತನ ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರೌಢಶಾಲಾ ಸಹಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ ಅಧ್ಯಕ್ಷ ಎಂ.ಸಿ.ಹಂಗರಕಿ ಹೇಳಿದರು.
ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಹಿರಿಯ ಪತ್ರಕರ್ತ ಈಶ್ವರ ಹೋಟಿ ಅವರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಕಳಕಳಿಯೊಂದಿಗೆ ಒಳ್ಳೆಯ ಕೆಲಸಗಳನ್ನು ಮಾಡಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹೋಟಿ ಅವರನ್ನು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಮ್ಮ ನಾಡಿಗೆ ಸಂದ ಗೌರವವಾಗಿದೆ. ಶಿಕ್ಷಣದ ಮೂಲಕ ಸಾವಿರಾರು ಮಕ್ಕಳಿಗೆ ಸ್ವಾವಲಂಬನೆ ಬದುಕಿಗೆ ಮಾರ್ಗದರ್ಶನ ಮಾಡುತ್ತಿರುವ ಅವರ ಕಾರ್ಯ ಸಾರ್ಥಕವಾಗಿದೆ ಎಂದರು.
ನಿವೃತ್ತ ಹಿರಿಯ ಶಿಕ್ಷಕ ಕೆ.ಎಂ.ಸಂಗೊಳ್ಳಿ ಮಾತನಾಡಿ, ಸಂಗೊಳ್ಳಿ ಗ್ರಾಮ ಸೇರಿದಂತೆ ತಾಲೂಕಿನ ಐತಿಹಾಸಿಕ ಸ್ಥಳಗಳ ಮಹತ್ವ ಕುರಿತು ಪರಿಣಾಮಕಾರಿ ಲೇಖನಗಳ ಮೂಲಕ ರಾಜ್ಯದಲ್ಲಿ ಜಾಗೃತಿ ಮೂಡಿಸಿದ ಕೀರ್ತಿ ಈಶ್ವರ ಹೋಟಿ ಅವರಿಗೆ ಸಲ್ಲುತ್ತದೆ ಎಂದರು.
ಹಿರಿಯ ಪತ್ರಕರ್ತ ಚಂದ್ರಯ್ಯ ಯರಗಟ್ಟಿಮಠ ಮಾತನಾಡಿ, ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಈಶ್ವರ ಹೋಟಿ ಅವರು ಸಮಾಜದ ಅಂಕು-ಡೊಂಕು ತಿದ್ದುವ ಕಾರ್ಯದಲ್ಲಿ ತೊಡಸಿಕೊಂಡಿದ್ದಾರೆ. ಹಲವಾರು ಸಾಮಾಜಿಕ ಕಳಕಳಿಯ ಲೇಖನಗಳ ಮೂಲಕ ನ್ಯಾಯ ಒದಗಿಸಿದ್ದಾರೆ. ಬಡವರ, ನೊಂದವರ, ಅಸಹಾಯಕರ ಹಾಗೂ ದುರ್ಬಲರ ಧ್ವನಿಯಾಗಿ ಪತ್ರಕರ್ತ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಹಿರಿಯ ಪತ್ರಕರ್ತ ಈಶ್ವರ ಹೂಟಿ ಮಾತನಾಡಿ, ಪ್ರೌಢಶಾಲಾ ಹಂತದಲ್ಲಿ ಒಬ್ಬ ವಿದ್ಯಾರ್ಥಿಗೆ ಒಳ್ಳೆಯ ಭದ್ರ ಬುನಾದಿ ಹಾಕಿಕೊಟ್ಟರೆ ಮುಂದೆ ಆತನ ಇಡಿ ಕುಟುಂಬ ಶಿಕ್ಷಣವಂತರಾಗುತ್ತಾರೆ. ಶಿಕ್ಷಣದಿಂದ ಬಡತನ ದೂರವಾಗುತ್ತದೆಂದರು.
ಮುಖ್ಯಾಧ್ಯಾಪಕ ಎಂ.ವ್ಹಿ.ನಾಗನೂರ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕಾ ಕಾರ್ಯದರ್ಶಿ ಎಸ್.ಎಂ.ಪಾಟೀಲ, ನಿವೃತ್ತ ಶಿಕ್ಷಕರಾದ ಎಂ.ವೈ.ಆನಿಕಿವಿ, ಆರ್.ಯು.ಹೊಂಗಲಮಠ, ಎಸ್.ಎಸ್.ಬಳಿಗಾರ, ಎ.ಎಂ.ಕರ್ಕಿ ವೇದಿಕೆಯಲ್ಲಿದ್ದರು.
ಶಿಕ್ಷಕರಾದ ಎಚ್.ಟಿ.ಭಜಂತ್ರಿ, ಪಿ.ಟಿ.ಹಸರಂಗಿ, ಸುಲೋಚನಾ ಹೊಸಮನಿ, ವಿಜಯಾ ಹಸರಂಗಿ, ವಿಜಯಲಕ್ಷ್ಮೀ ಕುಲಕರ್ಣಿ, ಚಂದ್ರಶೇಖರಯ್ಯ ಆರಾದ್ರಿಮಠ, ಪ್ರಕಾಶ ಕಿವಡಸಣ್ಣವರ, ಮಂಜುನಾಥ ಗರಗದ, ಕಸ್ತೂರೆವ್ವ ಹರಕುಣಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಈಶ್ವರ ಹೂಟಿ ಅವರನ್ನು ನಾನಾ ಸಂಘ-ಸಂಸ್ಥೆಗಳಿಂದ ಸತ್ಕರಿಸಲಾಯಿತು. ಶಿಕ್ಷಕ ಬಿ.ಟಿ.ಗುರಕನವರ ಸ್ವಾಗತಿಸಿದರು. ಶಿಕ್ಷಕ ಬಿ.ಆರ್.ಬೋರಗಲ್ ನಿರೂಪಿಸಿದರು. ಶಿಕ್ಷಕ ಕಿರಣ ದಂಡಾವತಿಮಠ ವಂದಿಸಿದರು.