ಗ್ರಾಮಗಳನ್ನು ಅಂಧತ್ವ ಮುಕ್ತ ಮಾಡಬೇಕು : ಡಾ. ಪ್ರಭುಗೌಡ
ತಾಳಿಕೋಟೆ 03: ಪ್ರತಿ ಗ್ರಾಮಗಳನ್ನು ಅಂಧತ್ವ ಮುಕ್ತ ಮಾಡಬೇಕು ಹಾಗೂ ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉಚಿತವಾಗಿ ಕಣ್ಣಿನ ಚಿಕಿತ್ಸೆ ನೀಡುವ ಉದ್ದೇಶದಿಂದ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಭುಗೌಡ ಬಿ.ಎಲ್ (ಚಬನೂರ) ಹೇಳಿದರು.
ಅವರು ತಮ್ಮ ಅನುಗ್ರಹ ಕಣ್ಣಿನ ಆಸ್ಪತ್ರೆಯ ವತಿಯಿಂದ ಚಬನೂರ, ಸಾಸನೂರ ಹಾಗೂ ಶರಣ ಸೋಮನಾಳ ಗ್ರಾಮಗಳಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಸಾನೂರನಲ್ಲಿ ಮಾತನಾಡಿದರು.
ಯಾವುದೇ ವ್ಯಕ್ತಿ ಎಷ್ಠೆ ಶಕ್ತಿವಂತನಾಗಿರಲಿ, ಸಿರಿತನವಿರಲಿ, ಜಗದ ಸೌಂದರ್ಯವನ್ನು ನೋಡುವ ಅವಕಾಶವಿಲ್ಲದಿದ್ದರೆ ಬದುಕು ಅಸಹನೀಯವಾಗುತ್ತದೆ. ಸ್ವಾವಲಂಭಿ ಬದುಕಿಗೆ ಅಡ್ಡಿಯಾಗುತ್ತದೆ. ಈ ದಿಸೆಯಲ್ಲಿ ನಮ್ಮ ನಡಿಗೆ ದೃಷ್ಟಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿ ಗ್ರಾಮಗಳನ್ನು ತಲುಪಲಿದ್ದೇವೆ. ಅಲ್ಲಿ ಅಗತ್ಯವಿದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ದೇಶದಲ್ಲಿ ಒಂದುವರೆ ಕೋಟಿಗೂ ಅಧಿಕ ಜನ ಅಂಧತ್ವದಲ್ಲಿ ಬದುಕುತ್ತಿದ್ದಾರೆ. ಇವರೆಲ್ಲರಿಗೂ ದೃಷ್ಟಿ ಒದಗಿಸುವ ಹಿರಿಯ ಉದ್ದೇಶದಿಂದ ರಾಷ್ಟ್ರೀಯ ಅಂಧತ್ವ ನಿವಾರಣೆ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಜೊತೆಗೆ ನಮ್ಮ ಅನುಗ್ರಹ ಕಣ್ಣಿನ ಆಸ್ಪತ್ರೆ ಕೈಜೋಡಿಸಿದೆ ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಿವಾನಂದ ದೇಸಾಯಿ ವಹಿಸಿದ್ದರು. ವೇದಿಕೆಯಲ್ಲಿ ಸಾಸನೂರ ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಹಯ್ಯಾಳ, ಹಿರಿಯರಾದ ಬಸನಗೌಡ ಪಾಟೀಲ, ಉದಯ ಯಾಳವಾರ, ದತ್ತಾತ್ರೇಯ ಮಠ ಇತರ ಪ್ರಮುಖರಿದ್ದರು.
ಸಾಸನೂರ ಗ್ರಮದಲ್ಲಿ ಒಟ್ಟು 170 ಜನರಲ್ಲಿ 26, ಚಬನೂರನಲ್ಲಿ 230 ಜನರಲ್ಲಿ 61 ಹಾಗೂ ಶರಣಸೋಮನಾಳದಲ್ಲಿ 150 ಜನರಲ್ಲಿ 30 ಹೀಗೆ ಒಟ್ಟು 550 ಜನ ಪರೀಕ್ಷೆಗೊಳಗಾಗಿದ್ದು ಒಟ್ಟು 117 ಜನರನ್ನು ಉಚಿತ ಶಸ್ತ್ರಚಿಕಿತ್ಸೆ ಹಾಗೂ ಓಷಧೋಪಚಾರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.
ತಪಾಸಣಾ ಶಿಬಿರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣಾಧಿಕಾರಿಗಳಾದ ಜುನೇದ ನದಾಫ, ಮಹಾಂತೇಶ ಹುಜರಾತಿ, ಸಂಗಮೇಶ ಪಾಟೀಲ, ಮಲ್ಲಿಕಾರ್ಜುನ ಗಡೇದ, ಕುಮಾರ ಬಿರಾದಾರ ರೇಣುಕಾ ಗಂಗ್ಯಾಳ, ಅಜಯ ಸಾವಂತ ಹಾಗೂ ಸುರೇಶ ಪೇಟಕರ ಪಾಲ್ಗೊಂಡಿದ್ದರು.