ಮೆಟರೈಜಿಯಂ ಬಳಕೆಯಿಂದ ಗೊಣ್ಣೆ ಹುಳುವಿನ ನಿಯಂತ್ರಣ ಸಾಧ್ಯ
ಮಾಂಜರಿ ದಿ 25: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಚಿಕ್ಕೋಡಿ, ಹಾಗೂ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರಖಾನೆಯ ಕಾರ್ಯಕ್ಷೇತ್ರದ ಸಕ್ಕರೆ ಕಾರಖಾನೆಯ ಸಿಬ್ಬಂದಿಗಳಿಂದ ಹಲವಾರು ಹಳ್ಳಿಗಳಲ್ಲಿ ಮೇ ತಿಂಗಳಿನಲ್ಲಿ ದೀಪಾಕರ್ಷಣೆ ಹಾಗೂ ಮೆಟರೈಜಿಯಂ ಬಳಕೆಯ ಪ್ರಾತ್ಯಕ್ಷತೆಯನ್ನು ರೈತರ ಹೊಲಗಳಲ್ಲಿ ತೆಗೆದುಕೊಳ್ಳಲಾಗಿತ್ತು.
ಇಂದು ದಿ. 24ರಂದು ಕೇರೂರ ಗ್ರಾಮದ ರೈತರಾದ ಮಹೇಶ ರೇಂದಾಳೆ ಇವರ ಜಮಿನಿಗೆ ಸಂಶೋಧನಾ ಕೇಂದ್ರದ ಅಧಿಕಾರಿಗಳಾದ ರಾಘವೇಂದ್ರ ತೆಗ್ಗಿ ಹಾಗೂ ಡಾ. ಮಂಜುನಾಥ ಚೌರಡ್ಡಿವರು ಕ್ಷೇತ್ರಕ್ಕೆ ಭೇಟಿ ನೀಡಿ ಮೆಟರೈಜಿಯಂ ಬಳಕೆಯ ಪರಿಣಾಮಕಾರಿ ಬಗ್ಗೆ ವೀಕ್ಷಣೆ ಮಾಡಿದರು. ರಾಸಾಯನಿಕ ಬಳಕೆಗಿಂತ ಮೆಟರೈಜಿಯಂ ಹಾಕಿದ ಹೊಲಗಳಲ್ಲಿ ಗೊಣ್ಣೆ ಹುಳುವಿನ ನಿಯಂತ್ರಣ ಪರಿಣಾಮಕಾರಿಯಾಗಿ ಕಾಣುತ್ತಿದೆ. ಕಾರಣ ರೈತರು ಬಾಧೆ ಇರುವ ಕ್ಷೇತ್ರದಲ್ಲಿ ಬರುವ ಕಬ್ಬು ಲಾವಣಿಯ ಸಮಯದಲ್ಲಿ 500 ಕೆಜಿ ತಿಪ್ಪೆ ಗೊಬ್ಬರದಲ್ಲಿ 5 ಕೆಜಿ ಮೆಟರೈಜಿಯಂ ಹಾಕಿ 8 ದಿನ ನೆರಳಲ್ಲಿ ಇಟ್ಟು ನಂತರ ಮಣ್ಣಿನಲ್ಲಿ ಹಾಕಬೇಕು ಎಂದು ಡಾ. ಮಂಜುನಾಥ್ ಚೌರಡ್ಡಿಯವರು ರೈತರಿಗೆ ತಿಳಿಸಿ ಹೇಳಿದರು.
ಕಾರ್ಖಾನೆಯ ಉಪ ಪ್ರಧಾನ ವ್ಯವಸ್ಥಾಪಕ(ಕಬ್ಬು)ರಾದ ಎನ್.ಎಸ್.ಹಿರೇಮಠವರು ಹಾಗೂ ಕಬ್ಬು ಅಭಿವೃದ್ಧಿ ಅಧಿಕಾರಿ ಸಚಿನ್ ಮೋಪಗಾರ, ರಾಹುಲ್ ಇಚಲಕರಂಜೆ ಉಪಸ್ಥಿತರಿದ್ದು ಕಾರ್ಖಾನೆಯ ಅಂಕಲಿಯ ಕಿಸಾನ್ ಬಜಾರ್ನಲ್ಲಿ ಹಾಗೂ ಎಸ್ ನಿಜಲಿಂಗಪ್ಪ ಸಂಶೋಧನಾ ಕೇಂದ್ರ ಬೆಳಗಾವಿಯಲ್ಲಿ ಮೆಟರೈಜಿಯಂ ಸಿಗುತ್ತದೆ ಎಂದು ಹೇಳಿದರು. ಗ್ರಾಮದ ರೈತ ಸದಸ್ಯರು ಹಾಜರಿದ್ದರು.