ಇಂಡಿ

ಆರ್ಥಿಕವಾಗಿ ಸ್ವಾವಲಂಬನೆ ಸಹಕಾರಿ ಸಂಘಗಳ ಪಾತ್ರ ಮುಖ್ಯ: ಸುನೀಲ ಪಾಟೀಲ

ಆರ್ಥಿಕವಾಗಿ ಸ್ವಾವಲಂಬನೆ ಸಹಕಾರಿ ಸಂಘಗಳ ಪಾತ್ರ ಮುಖ್ಯ: ಸುನೀಲ ಪಾಟೀಲ

ಲೋಕದರ್ಶನ ವರದಿ  

             ಇಂಡಿ 25: ಸಹಕಾರಿ ಸಂಘಗಳು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೆ, ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದರ ಜತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಬೇಕು. ಸಹಕಾರಿ ಕ್ಷೇತ್ರವು ಜನರ ವಿಶ್ವಾಸ ಮತ್ತು ಪಾರದರ್ಶಕತೆಯ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಎಂದು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುನಿಲ್ ಪಾಟೀಲ ಹೇಳಿದರು.

               ಇಂಡಿ ನಗರದ ನ್ಯಾಯಾಲಯದ ಸಮೀಪವಿರುವ ಸರ್ಕಾರಿ ನೌಕರರ ಸಂಘದ ಕಾಂಪ್ಲೆಕ್ಸ್ನಲ್ಲಿ ಸ್ಥಳಾಂತರಗೊಂಡ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದ ನೂತನ ಮುಖ್ಯ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

                ಸಹಕಾರಿ ಸಂಘಗಳು ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಜನರಿಗೆ ಆರ್ಥಿಕ ನೆರವು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡಿ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.

               ಸಹಕಾರಿ ತತ್ವಗಳನ್ನು ಪಾಲಿಸುವ ಮೂಲಕ ಸಂಘದ ಅಭಿವೃದ್ಧಿಯೊಂದಿಗೆ ಸದಸ್ಯರ ಆರ್ಥಿಕ ಪ್ರಗತಿಗೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಸಂಘದ ಸಂಸ್ಥಾಪಕ ಅಧ್ಯಕ್ಷ ಉಮೇಶ ಬಳಬಟ್ಟಿ ಮಾತನಾಡಿ, ಸದಸ್ಯರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಸಂಘದ ವತಿಯಿಂದ ಶೀಘ್ರದಲ್ಲಿಯೇ ಸ್ಟ್ಯಾಂಪ್ ಸೇವೆ ಆರಂಭಿಸಲಾಗುವುದು.

                ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ಸಂಘವನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು. ಉಪಾಧ್ಯಕ್ಷ ಯಲಗೊಂಡ ಬೇವನೂರ ಮಾತನಾಡಿ, ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ಸದಸ್ಯರ ಸಹಕಾರ ಬಹಳ ಮುಖ್ಯವಾಗಿದೆ.

               ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಿ ಹೆಚ್ಚಿನ ಜನರಿಗೆ ಆರ್ಥಿಕ ಸೇವೆ ಒದಗಿಸುವ ಗುರಿ ಹೊಂದಿದೆ ಎಂದರು. ಗೌರವಾಧ್ಯಕ್ಷ ಮಂಜುನಾಥ ಕಾಮಗೊಂಡ ಅವರು ಸಂಘದ ಬೆಳವಣಿಗೆಗೆ ಶುಭ ಹಾರೈಸಿದರು.ಸಂಘದ ವ್ಯವಸ್ಥಾಪಕ ನಿರ್ದೇಶಕ ಅಶೋಕ ಬಳಬಟ್ಟಿ, ನಿರ್ದೇಶಕರಾದ ಶಿವಾನಂದ ಮಠಪತಿ,

             ರಮೇಶ ಹತ್ತಿ, ಚಂದ್ರಾಮ ಮೇಡೆದಾರ, ಮಲ್ಲಿಕಾರ್ಜುನ ಬಿರಾದಾರ, ಸಿದ್ದಾರ್ಥ ಅರಳಿ, ಮಹಾಂತೇಶ ಮುಡಕೆ, ಬಸವರಾಜ ದಶವಂತ, ಶ್ರೀಶೈಲ ಪಟ್ಟಣ, ಸಿಬ್ಬಂದಿಗಳಾದ ಶ್ರೀಕಾಂತ ಗಡಗಲಿ, ಸಚಿನ್ ಮೇಡೆದಾರ,

               ಮಹೇಶ ಬಳಬಟ್ಟಿ, ಸದಸ್ಯರಾದ ಎಸ್‌.ಆರ್‌. ಬಿರಾದಾರ, ವೀರೇಂದ್ರ ಪಾಟೀಲ, ಅಣ್ಣಾರಾಯ ಆಳೂರ, ಬಿ.ಬಿ. ಬಿರಾದಾರ, ಜೋತಗೊಂಡ, ಪ್ರಕಾಶ ಲವಗಿ, ಮಲ್ಲಿಕಾರ್ಜುನ ಹಾವಿನಾಳಮಠ, ಶಂಕರ ಜಮಾದಾರ  ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ