ಕಾರವಾರ

ಪುನಃ ಪ್ರಸ್ತಾವನೆ ಸಲ್ಲಿಸಬೇಕೆಂಬ ಆದೇಶ ಅಸಮಂಜಸ

ಪುನಃ ಪ್ರಸ್ತಾವನೆ ಸಲ್ಲಿಸಬೇಕೆಂಬ ಆದೇಶ ಅಸಮಂಜಸ

ಕಾರವಾರ 8: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವ ಹಾಗೂ ಸಂಪನ್ಮೂಲ ಕ್ರೋಢೀಕರಿಸುವ ದೃಷ್ಟಿಯಿಂದ 2020-21ನೇ ಸಾಲಿನ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ನೇರ ನೇಮಕಾತಿ ಮಾಡುವ ಪ್ರಕ್ರಿಯೆಗೆ ಆರ್ಥಿಕ ಇಲಾಖೆ ಇದ್ದ ನಿರ್ಬಂಧವನ್ನು ಭಾಗಶಃ ತೆಗೆದು ಹಾಕಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಹೇಳಿದ್ದಾರೆ. ಆದರೆ ವಿವಿಧ ಇಲಾಖೆಗಳಲ್ಲಿ ಭರ್ತಿಯಾಗಿರುವ ಹುದ್ದೆಗಳಿಗೆ ಪುನಃ ಪ್ರಸ್ತಾವನೆ ಸಲ್ಲಿಸಬೇಕೆಂಬ ಆರ್ಥಿಕ ಇಲಾಖೆಯ ಆದೇಶ ಅಸಮಂಜ ಎಂದು ಸಂಕನೂರು ಟೀಕಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸರ್ಕಾರ ಹಿಂದೆ  ಕೋವಿಡ್ ಹಿನ್ನೆಲೆಯಲ್ಲಿ ನೇರ ನೇಮಕಾತಿಗೆ ನಿರ್ಬಂಧ ವಿಧಿಸಿ ಕಳೆದ  06-07-2020 ರಂದು ಆಜ್ಞೆಯನ್ನು ಹೊರಡಿಸಲಾಗಿತ್ತು. ಇದೀಗ  ವಿಧಾನ ಪರಿಷತ್ತು ಸದಸ್ಯರುಗಳ ಹಾಗೂ ವಿವಿಧ ಇಲಾಖೆ ಸಚಿವರ ಒತ್ತಡದ ಹಿನ್ನೆಲೆಯಲ್ಲಿ 30-03-2021 ರಂದು ಈ ತಡೆಯಾಜ್ಞೆಯನ್ನು ಸರ್ಕಾರ  ಭಾಗಶಃ ಹಿಂಪಡೆದಿರುವುದನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಸ್ವಾಗತಿಸಿದ್ದಾರೆ.

 ಈ ಹಿಂದೆ ರಾಜ್ಯದ ವಿವಿಧ ಸರಕಾರಿ ಇಲಾಖೆಗಳಲ್ಲಿ ತೆರವಾದ ಹುದ್ದೆಗಳನ್ನು ಕೆಪಿಎಸ್‍ಸಿ ಮೂಲಕ ಮತ್ತು ಇತರ ಇಲಾಖೆಗಳ ಮೂಲಕ ನಿಯಮಗಳನ್ನು ಪಾಲಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ನೀಡುವ ಹಂತದಲ್ಲಿದ್ದರು. ಇಂತಹ ಸಂದರ್ಭದಲ್ಲಿ ಅದಕ್ಕೆ ತಡೆಯಾಜ್ಞೆ ಬಂದ ಕಾರಣ ರಾಜ್ಯದಲ್ಲಿ ಸಹಸ್ರಾರು ಉದ್ಯೋಗಿ ಆಕಾಂಕ್ಷಿಗಳಿಗೆ ಅತ್ಯಂತ ನಿರಾಶೆ ಉಂಟಾಯಿತು. ಆದರೆ ಸರಕಾರ ಪುನಃ ಆದೇಶ ಸಂಖ್ಯೆ ಆ.ಇ. 03 ಬಿಇಎಂ 20 (ಭಾಗ) ದಿ. 30-03-2021 ರಂದು ತಡೆಯಾಜ್ಞೆಯನ್ನು ಭಾಗಶಃ ಹಿಂಪಡೆದು ಈಗಾಗಲೇ ನೇಮಕಾತಿ ಮಾಡಿಕೊಂಡ ಹುದ್ದೆಗಳಿಗೆ ಆದೇಶ ನೀಡಲು ಸಹಮತಿ ವ್ಯಕ್ತಪಡಿಸಿದ್ದು, ಸಮಾಧಾನ ತಂದಿದೆ ಎಂದು ಎಸ್.ವಿ. ಸಂಕನೂರ ಹೇಳಿದ್ದಾರೆ.

ಪುನಃ ಪ್ರಸ್ತಾವನೆ ಸಲ್ಲಿಸಲು ನೀಡಿದ ಸೂಚನೆಯನ್ನು ಹಿಂಪಡೆಯಲು ಒತ್ತಾಯ ;ನೇಮಕಾತಿ ಆದೇಶ ನೀಡುವ ಪೂರ್ವ ಆರ್ಥಿಕ ಇಲಾಖೆಗೆ ಮರು ಪ್ರಸ್ತಾವನೆ ಸಲ್ಲಿಸಲು ಆಡಳಿತ ಇಲಾಖೆಗಳಿಗೆ ದಿನಾಂಕ 30-03-2021 ರ ಸುತ್ತೋಲೆಯಲ್ಲಿ ಸೂಚನೆ ನೀಡಿರುವುದು, ಪುನಃ ವಿಳಂಬಕ್ಕೆ ಕಾರಣವಾಗಲಿದೆ. ಆದ್ದರಿಂದ ಸದ್ಯ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳುವಾಗ ಒಂದು ಬಾರಿ ಆರ್ಥಿಕ ಇಲಾಖೆಯ ಅನುಮತಿ ಪಡೆದಿರುವುದರಿಂದ ಪುನಃ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಸೂಚನೆ ನೀಡಿರುವದು ಅಸಮಂಜಸ ಆಗುವದರಿಂದ ಅದನ್ನು ಹಿಂಪಡೆಯಲು  ಸಂಕನೂರು ಒತ್ತಾಯಿಸಿದ್ದಾರೆ.


ಸುದ್ದಿ ಓದಿ