ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾ ಸೇವಾ ಆಂದೋಲನದ ಉದ್ದೇಶ: ರಾಜುಗೌಡ
ದೇವರಹಿಪ್ಪರಗಿ 03: ಜನರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಆಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಪರಿಹರಿಸುವ ಉದ್ದೇಶದಿಂದ ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು. ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ತಪ್ಪಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಜನರ ಅಹವಾಲುಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಬೇಕು. ಸ್ಥಳೀಯವಾಗಿ ಪರಿಹರಿಸಲಾಗದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು. ಸ್ಥಳೀಯ ಸಿದ್ದಾರೂಢ ಮಠದ ಪ.ಪೂ. ದಯಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ್ ನಿಂಗಣ್ಣ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸುಮಾರು 134 ಅರ್ಜಿಗಳು ಸ್ವೀಕರಿಸಲಾಯಿತು.
ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಇದೇ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಮುಳಸಾವಳಗಿ ಗ್ರಾಮದಲ್ಲಿ ಸುಮಾರು 50 ಲಕ್ಷ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಹಾಗೂ ಸಿದ್ದಾರೂಢ ಮಠದ ಬಳಿ, ಹುಚ್ಚಪ್ಪನ ದೇವಸ್ಥಾನದ ಬಳಿ, ಮುರಗಿ ಸಿದ್ದೇಶ್ವರ ದೇವಸ್ಥಾನದ ಬಳಿ ಮತ್ತು ತಾಂಡಾದ ಹಾಮುಲಾಲ್ ದೇವಸ್ಥಾನದ ಬಳಿ ತಲಾ 5 ಲಕ್ಷ ವೆಚ್ಚದ ಸಮುದಾಯ ಭವನಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ ಅವರು, ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಇಒ ಭಾರತಿ ಚೆಲುವಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಹಾಗೂ ಅರ್ಜಿದಾರರು ಉಪಸ್ಥಿತರಿದ್ದರು.