ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ
ಲೋಕದರ್ಶನ ವರದಿ
ವಿಜಯಪುರ, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆ, ಗ್ರಾಮ ಸ್ವರಾಜ್ಯ ಹಾಗೂ ಆರ್ಥಿಕ ವ್ಯವಸ್ಥೆಯ ತತ್ವಗಳು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಚರಕದಲ್ಲಿ ನೂಲು ನೇಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜೀವನಾದರ್ಶಗಳು ಪ್ರತಿಯೊಬ್ಬರ ಬದುಕಿಗೆ ಸ್ಫೂರ್ತಿದಾಯಕವಾಗಿವೆ. ಅವರ ಜೀವನಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಗಾಂಧೀಜಿ ಅವರ ಟ್ರಸ್ಟಿಶಿಪ್ ಪರಿಕಲ್ಪನೆ ಇಂದಿನ ಕಾರ್ೊರೇಟ್ ಸಾಮಾಜಿಕ ಹೊಣೆಗಾರಿಕೆ ವ್ಯವಸ್ಥೆಯೊಂದಿಗೆ ಸಾಮ್ಯತೆ ಹೊಂದಿದೆ. ಉದ್ಯಮಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಾರ್ವಜನಿಕ ಮೂಲಸೌಕರ್ಯ ಹಾಗೂ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಸ್ಥಳೀಯ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.