ಗಾಂಧೀಜಿ ಚಿಂತನೆಗಳು ಇಂದಿಗೂ ಪ್ರಸ್ತುತ: ಕುಲಪತಿ
ಲೋಕದರ್ಶನ ವರದಿ
ವಿಜಯಪುರ 02: ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರಳತೆ ಹಾಗೂ ನೈತಿಕ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ವಿದ್ಯಾರ್ಥಿನಿಯರು ಗಾಂಧೀಜಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿ ಶೆಟ್ಟಿ ಹೇಳಿದರು. ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ಗಾಂಧೀಜಿಯವರು ಸತ್ಯ ಮತ್ತು ಕರ್ತವ್ಯದ ಮಹತ್ವವನ್ನು ಅರಿತುಕೊಂಡಿದ್ದರು. ಬಳಿಕ ಸತ್ಯ ಮತ್ತು ಅಹಿಂಸೆಯನ್ನು ತಮ್ಮ ಜೀವನದ ಪ್ರಮುಖ ತತ್ವಗಳನ್ನಾಗಿ ಮಾಡಿಕೊಂಡರು. ಗಾಂಧೀಜಿಯವರು ತೋರಿಸಿದ ಅಹಿಂಸೆಯ ಮಾರ್ಗವನ್ನು ಇಂದಿನ ಪೀಳಿಗೆಯೂ ಅನುಸರಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಗಾಂಧೀಜಿಯವರ ವಿಚಾರಧಾರೆ ಮತ್ತು ಸಂದೇಶಗಳನ್ನು ವಿದ್ಯಾರ್ಥಿನಿಯರಿಗೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಎನ್‌ಎಸ್‌ಎಸ್, ಗಾಂಧಿ ಅಧ್ಯಯನ ಕೇಂದ್ರ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಮಾಹಿತಿ ಹಂಚಿಕೊಳ್ಳಬೇಕು. ಈ ಕಾರ್ಯಕ್ಕೆ ವಿಶ್ವವಿದ್ಯಾಲಯದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಕುಲಪತಿ ತಿಳಿಸಿದರು.