ಶಶಿಕಾಂತ ಗೂರುಜಿ ಕ್ಷಮೆಯಾಚಿಸಲಿ: ಜಿಗಜಿಣಗಿ
ವಿಜಯಪುರ 02: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕುಟುಂಬ ಸದಸ್ಯರ ಕುರಿತು ಅಗೌರವದ ರೀತಿಯಲ್ಲಿ ಮಾತನಾಡಿರುವ ಶಶಿಕಾಂತ ಗೂರುಜಿ ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಅವರು, ರೈತರ ಹಿತಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಕಿಸಾನ್ ಸಮ್ಮಾನ್ ಸೇರಿದಂತೆ ಅನ್ನದಾತರ ಪರ ಯೋಜನೆಗಳನ್ನು ರೂಪಿಸಿದೆ ಎಂದರು. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಟೀಕಿಸುವ ಹಾಗೂ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಟೀಕಿಸುವ ಭರದಲ್ಲಿ ಅವರ ಕುಟುಂಬ ಸದಸ್ಯರ ಬಗ್ಗೆ ಅಗೌರವದಿಂದ ಮಾತನಾಡುವುದು ಸರಿಯಲ್ಲ ಎಂದು ಜಿಗಜಿಣಗಿ ಹೇಳಿದರು. ರೈತ ಹೋರಾಟಗಳಿಗೆ ಗೌರವವಿದ್ದು, ರೈತ ಮುಖಂಡರು ಸಾತ್ವಿಕವಾಗಿ ಟೀಕೆ ಮಾಡಬೇಕು. ಕುಟುಂಬ ಸದಸ್ಯರಿಗೆ ನೋವುಂಟು ಮಾಡುವ ರೀತಿಯ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಶಶಿಕಾಂತ ಗೂರುಜಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.